ನವದೆಹಲಿ : ಈಶಾನ್ಯ ರಾಜ್ಯಗಳಾಗಿರುವ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(ಎಎಫ್ಎಸ್ಪಿಎ) ವ್ಯಾಪ್ತಿಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ಮೂರು ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ರಾಜ್ಯಗಳಲ್ಲಿ ಉಂಟಾಗುತ್ತಿದ್ದ ಗಲಭೆಯನ್ನು ಶಾಸ್ವತವಾಗಿ ಕೊನೆಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅನೇಕ ಒಪ್ಪಂದಗಳನ್ನು ಜಾರಿಗೆ ತಂದಿದ್ದು, ಇದೀಗ ಎಎಫ್ಎಸ್ಪಿಎ ವ್ಯಾಪ್ತಿ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ ಪ್ರದೇಶದಲ್ಲಿ ಸೇನೆಗಳಿಗೆ ವಿಶೇಷ ಅಧಿಕಾರವಿದೆ. 1958ರ ಸಶಸ್ತ್ರ ಪಡೆಗಳ ಕಾಯ್ದೆಯ ಮೂಲಕ ವಿಶೇಷ ಅಧಿಕಾರ ನೀಡಲಾಗಿದೆ. ಕಾನೂನು ಬಾಹಿರ ವ್ಯಕ್ತಿಗಳ ಮೇಲೆ ಗುಂಡು ಹಾರಿಸಬಹುದು, ಅನುಮಾನಿತ ವ್ಯಕ್ತಿಗಳ ಮೇಲೆ ವಾರಂಟ್ ಇಲ್ಲದೇ ಬಂಧಿಸಬಹುದು, ಯಾವುದೇ ವಾಹನವನ್ನು ತಡೆಗಟ್ಟಿ ತಪಾಸಣೆ ಮಾಡಬಹುದು ಎಂದು ಅಧಿಕಾರ ನೀಡಲಾಗಿದೆ. ಈ ಹಿಂದಿನಿಂದಲೂ ಈ ಕಾಯ್ದೆಗೆ ಆ ರಾಜ್ಯದ ಜನತೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈಗ ಕೇಂದ್ರ ಸರ್ಕಾರ ಹಂತ ಹಂತವಾಗಿ ವ್ಯಾಪ್ತಿಯನ್ನು ಕಡಿತಗೊಳಿಸಲು ಮುಂದಾಗಿದೆ.










