ನವದೆಹಲಿ: ರಷ್ಯಾ, ಉಕ್ರೇನ್ ಸಂಘರ್ಷ ಆರಂಭವಾದಾಗಿನಿಂದ ಇಲ್ಲಿ ಯವರೆಗೂ 22,500ವಿದ್ಯಾರ್ಥಿಗಳನ್ನು ಉಕ್ರೇನ್ ನಿಂದ ಭಾರತ ಕ್ಕೆ ಕರೆ ತರಲಾಗಿದ್ದು, ಆಪರೇಷನ್ ಗಂಗಾ ಮಿಷನ್ ಪೂರ್ಣಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಭಾರತಕ್ಕೆ ವಾಪಸ್ ಆದ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಸಂಬಂಧಿಸಿದಂತೆ ವಿದ್ಯಾ ರ್ಥಿನಿ ಅಹಾನಾ ಸೇರಿದಂತೆ ಹಲವು ಜನರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ಎನ್.ವಿ ರಮಣ ನೇತೃತ್ವದ ತ್ರೀ ಸದಸ್ಯ ಪೀಠ ವಿಚಾರಣೆ ನಡೆಸಿತು.
ಅಟಾರ್ನಿ ಜನರಲ್ ವೇಣುಗೋಪಾಲ್, ಉಕ್ರೇನ್ ನಿಂದ ಇಲ್ಲಿ ಯವರೆಗೆ 22,500 ವಿದ್ಯಾರ್ಥಿಗಳು ಸ್ವದೇಶಕ್ಕೆ ಬಂದಿದ್ದು, ಈ ದೊಡ್ಡ ಮಿಷನ್ ಪೂರ್ಣಗೊಂಡಿದೆ ಎಂದು ಹೇಳಿದರು. ಈ ವೇಳೆ ವಿದ್ಯಾರ್ಥಿಗಳ ಶಿಕ್ಷಣ ದ ಬಗ್ಗೆ ಮುಖ್ಯ ನ್ಯಾ. ರಮಣ ಅವರು ಕೇಳಿದ ಪ್ರಶ್ನೆ ಗೆ ಉಕ್ರೇನ್ ನಿಂದ ವಾಪಸ್ ಆಗಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಲಾಗುತ್ತಿದೆ. ಭಾರತದಲ್ಲೇ ಅಧ್ಯಯನ ನಡೆಸಲು ಒತ್ತು ನೀಡಲಾಗುವುದು. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಮಯ ಬೇಕಾಗಬಹುದು ಎಂದು ಉತ್ತರಿಸಿದರು.










