ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಗೆ ಅಪರಿಚಿತ ವ್ಯಕ್ತಿಯಿಂದ 400 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಇಮೇಲ್ ಬಂದಿದೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ಅಂಬಾನಿಗೆ ಕಳುಹಿಸಲಾದ ಮೂರನೇ ಬೆದರಿಕೆ ಇಮೇಲ್ ಇದಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಅಕ್ಟೋಬರ್ 27 ರಂದು 200 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟು ಬೆದರಿಕೆ ಇಮೇಲ್ ಪತ್ರ ಕಳುಹಿಸಿದ್ದ ಅದೇ ಇಮೇಲ್‌ನಿಂದ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಈ ಬಾರಿ ಬೇಡಿಕೆ ಮೊತ್ತವನ್ನು 400 ಕೋಟಿಗೆ ಹೆಚ್ಚಿಸಲಾಗಿದೆ.
ನಿಮಗೆ ಎಷ್ಟೇ ಉತ್ತಮ ಭದ್ರತೆ ಇದ್ದರೂ, ನಮ್ಮ ಒಬ್ಬನೇ ಒಬ್ಬ ಸ್ನೈಪರ್ ನಿಮ್ಮನ್ನು ಕೊಲ್ಲುತ್ತಾನೆ. ಈ ಬಾರಿ ನಮ್ಮನ್ನ ಪತ್ತೆ ಮಾಡುವುದಕ್ಕಾಗಲಿ ಅಥವಾ ಬಂಧಿಸುವುದಕ್ಕಾಗಲಿ ಸಾಧ್ಯವಿಲ್ಲ ಎಂದೂ ಇಮೇಲ್‌ನಲ್ಲಿ ಅಪರಿಚಿತ ವ್ಯಕ್ತಿ ಎಚ್ಚರಿಕೆ ನೀಡಿದ್ದಾನೆ. 3ನೇ ಬಾರಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ನಿವಾಸಕ್ಕೆ ಭದ್ರತೆ ಹೆಚ್ಚಿಸಿದ್ದಾರೆ.
ಇದೇ ತಿಂಗಳ ಅಕ್ಟೋಬರ್ 27 ರಂದು ಮೊದಲ ಇಮೇಲ್ ಬೆದರಿಕೆ ಪತ್ರ ಬಂದಿತ್ತು. ಅದರಲ್ಲಿ 20 ಕೋಟಿ ರೂ.ಗಳನ್ನು ತಪ್ಪದೇ ಕೊಡಬೇಕು. ನಮ್ಮ ಬಳಿ ಶಾರ್ಪ್ ಶೂಟರ್‌ಗಳಿದ್ದು, ಹಣ ನೀಡುವಲ್ಲಿ ವಿಫಲರಾದರೆ ಗುಂಡು ಹಾರಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು. ಅಕ್ಟೋಬರ್ 28 ರಂದು ಅದೇ ಇಮೇಲ್‌ನಿಂದ ಅಪರಿಚಿತ ವ್ಯಕ್ತಿಯೊಬ್ಬ ಮತ್ತೊಂದು ಬೆದರಿಕೆ ಪತ್ರ ಕಳುಹಿಸಿದ್ದ. ಹಿಂದಿನ ಇ-ಮೇಲ್‌ಗೆ ಪ್ರತಿಕ್ರಿಯೆ ನೀಡದ ಕಾರಣ ಹಣದ ಬೇಡಿಕೆಯನ್ನು 200 ಕೋಟಿ ರೂ.ಗೆ ಹೆಚ್ಚಿಸಿರುವುದಾಗಿ ಎಚ್ಚರಿಕೆ ನೀಡಿದ್ದ.
ಕೊಲೆ ಬೆದರಿಕೆ ಸಂಬಂಧ ಮುಕೇಶ್ ಅಂಬಾನಿ ಅವರ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈನ ಗಾಮ್‌ದೇವಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಇದೀಗ ಅದೇ ಇಮೇಲ್‌ನಿಂದ ಅಪರಿಚಿತ ವ್ಯಕ್ತಿಯೊಬ್ಬ 3ನೇ ಇಮೇಲ್ ಬೆದರಿಕೆ ಪತ್ರ ಕಳುಹಿಸಿದ್ದು, ತಮ್ಮ ಹಣದ ಬೇಡಿಕೆಯನ್ನು ದ್ವಿಗುಣಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.










