ನವದೆಹಲಿ : ಉಪರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರಿಗೆ ಇಂದು ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ನೀಡಲಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾವೆಲ್ಲರೂ ರಾಜ್ಯಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಧನ್ಯವಾದ ಹೇಳಲು ಇಲ್ಲಿ ಸೇರಿದ್ದೇವೆ. ಇದು ಸದನಕ್ಕೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಸದನದ ಹಲವಾರು ಐತಿಹಾಸಿಕ ಕ್ಷಣಗಳು ವೆಂಕಯ್ಯ ನಾಯ್ಡು ಅವರ ಉಪಸ್ಥಿತಿಯಲ್ಲಿ ಘಟಿಸಿವೆ ಎಂದು ಹೇಳಿದರು.
ನಾನು ವೆಂಕಯ್ಯ ನಾಯ್ಡು ಅವರ ಜೊತೆ ಬಹಳ ಸಮಯ ಕೆಲಸ ಮಾಡಿದ್ದೇನೆ. ಅವರು ವಿಭಿನ್ನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ ಮತ್ತು ಅವರು ಪ್ರತಿಯೊಂದನ್ನು ಅತ್ಯಂತ ಸಮರ್ಪಣಾಭಾವದಿಂದ ನಿರ್ವಹಿಸುತ್ತಾರೆ. ನಮ್ಮ ಉಪರಾಷ್ಟ್ರಪತಿಯಾಗಿ ಯುವಜನ ಕಲ್ಯಾಣಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದೀರಿ. ನಿಮ್ಮ ಬಹಳಷ್ಟು ಕಾರ್ಯಕ್ರಮಗಳು ಯುವ ಶಕ್ತಿಯ ಮೇಲೆ ಕೇಂದ್ರೀಕೃತವಾಗಿವೆ ಎಂದರು.
ಎರಡು ದಿನಗಳ ಹಿಂದಷ್ಟೇ ಉಪರಾಷ್ಟ್ರಪತಿ ಚುನಾವಣೆ ನಡೆದಿದ್ದು, ಎನ್ ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಭರ್ಜರಿ ಜಯ ಗಳಿಸಿದ್ದಾರೆ. ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಗಸ್ಟ್ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.










