ಗಾಂಧಿನಗರ : ಇತ್ತೀಚೆಗಷ್ಟೇ ಸಂಚಾರ ಶುರು ಮಾಡಿರುವ ಮುಂಬೈ-ಗಾಂಧಿನಗರ ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಇದರ ಬೆನ್ನಲ್ಲೇ ಇದೀಗ ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ.
ನಿನ್ನೆ ಮಧ್ಯಾಹ್ನ 3.55ರ ಸುಮಾರಿಗೆ ಹಸುವೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಡಿಕ್ಕಿಯಾಗಿದೆ. ಕಂಝರಿ-ಆಣಂದ್ ನಡುವಿನ ರೈಲ್ವೆ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ಇದೊಂದು ಸಣ್ಣ ಘಟನೆಯಾಗಿದ್ದು, ದೊಡ್ಡ ಮಟ್ಟದ ಹಾನಿಯಾಗಿಲ್ಲ ಎಂದು ವಡೋದರಾ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ 11.18ರ ವೇಳೆಗೆ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಗುಜರಾತ್ನ ವತ್ವಾ ರೈಲು ನಿಲ್ದಾಣದ ಬಳಿ ಟ್ರ್ಯಾಕ್ ನಲ್ಲಿ ಎಮ್ಮೆಗಳಿಗೆ ರೈಲು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ 4 ಎಮ್ಮೆಗಳು ಸಾವನ್ನಪ್ಪಿದ್ದವು. ರೈಲಿನ ಮುಂಭಾಗ ಹೊಡೆದು ಹೋಗಿತ್ತು. ಪರಿಣತರ ತಂಡವು ಅದನ್ನು ಸರಿಪಡಿಸಿದ್ದರು.
ಸೆಪ್ಟೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು.










