ಎರಡನೇ ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಾನ್‌ಸ್ಟೇಬಲ್‌ ಪ್ರಿಯಕರನನ್ನೇ ಬೆಂಕಿಹಚ್ಚಿ ಕೊಂದ ಪ್ರಿಯತಮೆ…

55
firstsuddi

ಬೆಂಗಳೂರು: ಎರಡನೇ ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಕಾನ್‌ಸ್ಟೇಬಲ್‌ ಪ್ರಿಯಕರನನ್ನೇ ಬೆಂಕಿಹಚ್ಚಿ ಕೊಂದಿರುವ ಘಟನೆ ನಗರದ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾನ್ ಸ್ಟೇಬಲ್ ಸಂಜಯ್ ಮೃತ ವ್ಯಕ್ತಿ, ರಾಣಿ ಬೆಂಕಿ ಹಚ್ಚಿ ಕೊಂದ ಪ್ರಿಯತಮೆ. ಕಾನ್‌ಸ್ಟೇಬಲ್‌ ಸಂಜಯ್ ಮತ್ತು ಹೋಂಗಾರ್ಡ್ ರಾಣಿ ಇಬ್ಬರೂ ಕೂಡ ಬಸವನಗುಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಬ್ಬರ ಮಧ್ಯೆ ಪ್ರೇಮ ಬೆಳೆದಿತ್ತು. ಮದುವೆಯಾಗಿದ್ದರೂ ಕಾನ್‌ಸ್ಟೇಬಲ್‌ ಜೊತೆ ಕೆಲವು ತಿಂಗಳಿಂದ ರಾಣಿ ಪ್ರೀತಿಸುತ್ತಿದ್ದಳು.

ಇತ್ತೀಚೆಗೆ ಸಂಜಯ್​ನನ್ನು ರಾಣಿ ನಿರ್ಲಕ್ಷ್ಯಿಸಲು ಆರಂಭಿಸಿದ್ದಾಳೆ. ಹೀಗಾಗಿ ಸಂಜಯ್‌, ಎರಡು ದಿನಗಳ ಹಿಂದೆ ಆಕೆ ಮನೆಗೆ ಹೋಗಿದ್ದಾಗ ಅದೇ ಸಮಯಕ್ಕೆ ಯುವಕನೊಬ್ಬ ಕರೆ ಮಾಡಿದ್ದಾನೆ. ನಂತರ ಸಂಜಯ್ ಆಕೆಯ ಮೊಬೈಲ್ ತೆಗೆದು ನೋಡಿದಾಗ ಬೇರೆ ಯುವಕರ ಜೊತೆಗೂ ಮಾತನಾಡಿರುವುದು ಗೊತ್ತಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು.

ನಂತರ ರಾಣಿಯೊಂದಿಗೆ ಜಗಳವಾಡಿಕೊಂಡು ಹೊರಗೆ ಹೋಗಿದ್ದ ಸಂಜಯ್ ಪೆಟ್ರೋಲ್‌ನೊಂದಿಗೆ ಪ್ರತ್ಯಕ್ಷವಾಗಿದ್ದಾನೆ. ರಾಣಿಯನ್ನ ಹೆದರಿಸುವ ಸಲುವಾಗಿ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ನಾನೇ ಸಾಯ್ತೀನಿ ಅಂತ ಹೆದರಿಸಿದ್ದಾನೆ. ಅದಕ್ಕೆ ನೀನೇನು ಸಾಯೋದು ನಾನೇ ಸಾಯಿಸ್ತೀನಿ ಅಂತ ರಾಣಿ ಬೆಂಕಿ ಕಡ್ಡಿ ಕೀರಿದ್ದಾಳೆ. ಆಗ ಬೆಂಕಿಯ ಸಣ್ಣ ಕಿಡಿ ಸಂಜಯ್‌ಗೆ ತಗುಲಿ ದೇಹಕ್ಕೆಲ್ಲಾ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಪ್ರಿಯತಮೆ ನೀರು ಹಾಕಿ ಬೆಂಕಿ ಆರಿಸಿದ್ದಾಳೆ. ಬಳಿಕ ಬೈಕ್‌ನಲ್ಲಿ ತಾನೇ ಸಂಜಯ್‌ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗಿನ ಜಾವ 4 ಗಂಟೆ ವೇಳೆಗೆ ಸಂಜಯ್ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.