ಲಕ್ನೋ : ಎರಡು ಬಸ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ 8 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್ ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋನಿ ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ನರೇಂದ್ರಪುರ ಮದ್ರಹಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಎರಡೂ ಬಸ್ ಗಳು ಬಿಹಾರದ ಸೀತಾಮರ್ಹಿ ಮತ್ತು ಸುಪೌಲ್ ನಿಂದ ದೆಹಲಿಗೆ ಹೋಗುತ್ತಿದ್ದವು. ಬಸ್ ಗಳೆರಡು ಸಂಪೂರ್ಣ ಜಖಂ ಗೊಂಡಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.










