ಒಡಿಶಾ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ಒಡಿಶಾದ ಗಂಜಾಂ ಜಿಲ್ಲೆಯ ಸೊರಡ ಸಮೀಪದ ಕೇಶರಿಪಟ್ಟಣದಲ್ಲಿ ನಡೆದಿದೆ.
ಮೃತರನ್ನು ಆಶುರಬಂದ್ನ ಶ್ರೀಕಾಂತ್ ಗೌಡ, ದುಲಾದದ ಮನೋಜ್ ಡಾಕುವಾ, ಗೋಪಾಲಪುರ ಸಶನ್ನ ಮಹೇಂದ್ರ ನಾಯಕ್, ಸೊರಡದ ಜಯಂತ್ ಬಡತ್ಯ ಮತ್ತು ಸನಾ ಸೊರಡದ ರಜನಿ ಗೌಡ ಎಂದು ಗುರುತಿಸಲಾಗಿದೆ. 43 ವರ್ಷದ ರಜನಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ 30ರಿಂದ 35ರೊಳಗಿನವರು ಎಂಬುದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಎರಡು ಬೈಕ್ಗಳಲ್ಲಿ ತಲಾ ಮೂವರು ತೆರಳುತ್ತಿದ್ದರು. ಒಂದು ಬೈಕ್ ಅಸುರಬಂಧದಿಂದ ಸೊರಡ ಕಡೆಗೆ ಹೋಗುತ್ತಿದ್ದರೆ, ಮತ್ತೊಂದು ಬೈಕ್ ಸೊರಡದಿಂದ ಹಿಂದಿರುಗಿ ಬರುತ್ತಿದ್ದಾಗ ಅಪಘಾತ ನಡೆದಿದೆ. ಆರು ಜನರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರ ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಬ್ರಹ್ಮಪುರ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಓರ್ವ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಸೊರಡ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.










