ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಚಿಕಿತ್ಸೆ ಹಿನ್ನೆಲೆ, ಕಳೆದ ರಾತ್ರಿ ಅಮೆರಿಕ ಫ್ಲೈಟ್ ಹತ್ತಿದರು. ವೈದ್ಯಕೀಯ ಪ್ರಕ್ರಿಯೆ ನಿಟ್ಟಿನಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನಮಾನ ಗಳಿಸಿರುವ ಶಿವಣ್ಣ ಫ್ಲೋರಿಡಾದ ಮಿಯಾಮಿಯಲ್ಲಿ ಡಿಸೆಂಬರ್ 24 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜನಪ್ರಿಯ ನಟ, ಇಂಥ ಸಂದರ್ಭ ನಾವೇ ಕೊಂಚ ಭಾವುಕರಾಗುತ್ತೇವೆ. ಆದ್ರೆ ಹೆದರಬೇಡಿ. ಪ್ಯಾರಾಮೀಟರ್ಸ್ ಎಲ್ಲವೂ ಚೆನ್ನಾಗಿದೆ. ಚೆಕ್ ಮಾಡಿದಾಗ, ಎವ್ರಿಂಥಿಗ್ ಈಸ್ ಗುಡ್. ಆದ್ರೂ ಸ್ವಲ್ಪ ಆತಂಕ ಅನ್ನೋದು ಇರುತ್ತದೆ. ಮನೆಯಿಂದ ಹೊರಡುತ್ತಿದ್ದೀವಲ್ವಾ, ನಮ್ಮವರನ್ನು ನೋಡಿದಾಗ ಸ್ವಲ್ಪ ಎಮೋಷನಲ್ ಆದೆ. 30-35 ದಿನಗಳು ಮನೆಯಿಂದ, ಭಾರತದಿಂದ ಆಚೆ ಹೋಗುತ್ತಿದ್ದೇವೆಂದಾಗ ಒಂದು ನೋವಿರುತ್ತದೆ. ಆದ್ರೆ ಎಲ್ಲರ ಶುಭ ಹಾರೈಕೆಗಳಿವೆ. ಇತರೆ ಸ್ಟಾರ್ಸ್ ಅಭಿಮಾನಿಗಳದ್ದೂ ವಿಶಸ್ ಇದೆ. ಇದನ್ನು ನೋಡಿದ್ರೆ ಖುಷಿಯಾಗುತ್ತದೆ. ಮಾಧ್ಯಮದವರ ಬೆಂಬಲವೂ ಇದೆ. ನನಗೆ ಹೀಗಾಗಿದೆ ಎಂದು ಗೊತ್ತಾದಗಲೂ ಯಾರೂ ಗ್ಲೋರಿಫೈ ಮಾಡಲಿಲ್ಲ. ಅದು ನನಗೆ ಬಹಳ ಖುಷಿಯಾಯಿತು. ಅಷ್ಟೊಂದು ಪ್ರೀತಿ, ಗೌರವ ನನ್ನ ಮೇಲಿಟ್ಟಿದ್ದಾರೆ. ಅದೊಂದು ಆಶೀರ್ವಾದ. ಜನವರಿ 26ಕ್ಕೆ ಇಲ್ಲಿರುತ್ತೇನೆ. ಜನವರಿ 25ಕ್ಕೆ ಅಲ್ಲಿಂದ ಹೊರಡುತ್ತೇವೆ” ಎಂದು ಮಾಹಿತಿ ಹಂಚಿಕೊಂಡರು.










