ಸಚಿವೆ ಲಕ್ಷ್ಮಿ ಹೆಬ್ಬಾಳ್ಕಕರ್ ಗೆ ಅಶ್ಲೀಲ ಪದ ಬಳಕೆ: ಸಿಟಿ ರವಿ ವಿರುದ್ಧ ಸಭಾಪತಿಗೆ ದೂರು.

39

ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅವಹೇನಕಾರಿ ಹೇಳಿಕೆ ಖಂಡಿಸಿ ಗುರುವಾರ ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಕೇಳಿಬಂದಿದೆ. ಇಂದು ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ನಂತರ ಶೂನ್ಯ ವೇಳೆಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಆಡಳಿತ ಸದಸ್ಯರು ಧರಣಿಗೆ ಮುಂದಾದರು. ಕೂಡಲೇ ಅಮಿತ್ ಶಾ ಅವರನ್ನು ಬಂಧಿಸಿ, ರಾಜೀನಾಮೆ ಪಡೆಯುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಇದೇ ವೇಳೆ, ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಭಾವಚಿತ್ರ ಹಿಡಿದು ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನೂ ಅವರು ನೀಡಲಿಲ್ಲ ಎಂದು ಹರಿಹಾಯ್ದರು. ಬಳಿಕ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿ.ಟಿ.ರವಿ ಆರೋಪಿಸಿದರು. ಇದಕ್ಕೆ ಕೌಂಟರ್ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀವು ರಸ್ತೆ ಅಪಘಾತದಲ್ಲಿ ಇಬ್ಬರನ್ನು ಕೊಲೆ ಮಾಡಿದ್ದೀರಿ, ಹಾಗಾಗಿ, ನೀವು ಕೊಲೆಗಾರರು ಎಂದು ದೂರಿದರು. ಆಗ ಸಿ.ಟಿ.ರವಿ, ಅಶ್ಲೀಲ ಪದ ಬಳಸಿ, ನಿಮ್ಮನ್ನು ನಾನು ಹಾಗೆ ಕರೆಯೋಕೆ ಆಗುತ್ತಾ ಎಂದರು. ಗದ್ದಲ ತೀವ್ರವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನವನ್ನು ಕೆಲಕಾಲ ಮುಂದೂಡಿದರು. ಬಳಿಕ ಆಡಳಿತ ಪಕ್ಷದ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ, ಸಿಟಿ ರವಿ ವಿರುದ್ಧ ದೂರು ನೀಡಿದ್ದು, ಅವರನ್ನು ಸದಸ್ಯ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ಒತ್ತಾಯಿಸಿದ್ದಾರೆ.