ಬೆಂಗಳೂರು : ಪದ್ಮವಿಭೂಷಣ ಗೌರವಕ್ಕೆ ಪಾತ್ರರಾದ ಎಸ್.ಎಂ. ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದರು. ಸದಾಶಿವ ನಗರದಲ್ಲಿರುವ ಕೃಷ್ಣ ಅವರ ನಿವಾಸಕ್ಕೆ ತೆರಳಿ ಹಾರ, ಶಾಲು ಹೊದಿಸಿ ಸನ್ಮಾನಿಸಿದರು. ಸಿಎಂಗೆ ಸಚಿವರಾದ ಅಶ್ವತ್ಥ್ ನಾರಾಯಣ ಆರ್.ಅಶೋಕ್ , ಗೋಪಾಲಯ್ಯ, ಡಾ.ಕೆ ಸುಧಾಕರ್ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಸಿಎಂ, ಕರ್ನಾಟಕದ ಹೆಮ್ಮೆ ಎಸ್.ಎಂ ಕೃಷ್ಣ ಅವರು, ನಾಡು ಕಂಡ ಸೃಜನಶೀಲ, ಕ್ರಿಯಾಶೀಲ, ಸಜ್ಜನಿಕೆಯ ಉತ್ತಮ ಆಡಳಿತ ಕೊಟ್ಟವರು. ಹತ್ತು ಹಲವಾರು ಜನ ಪರ ಕಾರ್ಯಕ್ರಮ ಕೊಟ್ಟವರು. ಇವತ್ತು ಅವರಿಗೆ ಕೇಂದ್ರ ಪದ್ಮವಿಭೂಷಣ ಕೊಟ್ಟಿದೆ. ಇದು ಸಂತೋಷದ ವಿಷಯ. ಅವರ ಆಡಳಿತ ಕಾಲದಲ್ಲಿ ಅನೇಕ ಸಮಸ್ಯೆ ಯಶಸ್ವಿಯಾಗಿ ಎದುರಿಸಿದ್ದಾರೆ. ಯಶಸ್ವಿನಿ ಯೋಜನೆ ಕೊಟ್ಟವರು ಕೃಷ್ಣ ಅವರು ಎಂದು ಹೊಗಳಿದ್ದಾರೆ.
ಭಾರತಕ್ಕೆ ಇನ್ಶೂರೆನ್ಸ್ ಬಂದಿರಲಿಲ್ಲ. ಅದಕ್ಕೂ ಮುನ್ನ ರಾಜ್ಯದಲ್ಲಿ ಯಶಸ್ವಿನಿ ಜಾರಿ ಮಾಡಿದ್ರು. ಈಗ ಮತ್ತೆ ಯಶಸ್ವಿ ಯೋಜನೆ ಜಾರಿ ಮಾಡಿ 300 ಕೋಟಿ ರಿಲೀಸ್ ಮಾಡಿದ್ದೇನೆ. ಕೃಷಿ, ರೈತರಿಗೆ ಅತಿ ಹೆಚ್ಚು ಯೋಜನೆ ಮಾಡಿದ್ದು ಕೃಷ್ಣ ಅವರ ಸಾಧನೆ. ಹಸಿದ ಹೊಟ್ಟೆಯಲ್ಲಿ ವಿದ್ಯೆ ಕಲಿಯೋದು ಕಷ್ಟ ಅಂತ ಬಿಸಿಯೂಟ ತಂದ್ರು. ಈ ಕೆಲಸ ಯಾರು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾವೇರಿ, ಕೃಷ್ಣ ನದಿ ನೀರು ವಿಚಾರದಲ್ಲಿ ಅವರ ನಿಲುವು ನೋಡಿದ್ದೇವೆ. ಕೃಷ್ಣ ಅವರ ಸಾರ್ವಜನಿಕ ಬದುಕೆ ನಮಗೆ ಮಾದರಿ. ಎಲ್ಲಾ ರಂಗದಲ್ಲಿ ಕೂಡಾ ಉತ್ತಮ ಆಡಳಿತ, ಕಾರ್ಯಕ್ರಮ ಕೊಟ್ಟವರು. ನಾಡಿನ ಪರ ಗಟ್ಟಿ ನಿಲುವು ಅವರದ್ದು. ಮೋದಿ ಅವರು ಇದನ್ನ ಗುರುತಿಸಿ ಪದ್ಮವಿಭೂಷಣ ಕೊಟ್ಡಿದ್ದಾರೆ ಎಂದರು.