ಚಿಕ್ಕಮಗಳೂರು : ಬಹುಜನರು ತಮ್ಮ ಏಳಿಗೆಗಾಗಿ ದಾದಾ ಸಾಹೇಬ್ ಕಾನ್ಸಿರಾಂ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ನೀಡಿದರು.
ನಗರದ ಬಿಎಸ್‍ಪಿ ಕಛೇರಿಯಲ್ಲಿ ಇಂದು ಏರ್ಪಡಿಸಿದ್ದ ಪಕ್ಷದ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಸಿರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾದಾ ಸಾಹೇಬ್ ಕಾನ್ಸಿರಾಂ ಅವರು ಕೇವಲ ವ್ಯಕ್ತಿಯಲ್ಲ ಅವರೊಂದು ಮಹಾನ್ ಶಕ್ತಿ, ಬಹುಜನರಿಗೆ ಅವರೇ ಶಕ್ತಿ ಮತ್ತು ಸ್ಪೂರ್ತಿ ಎಂದ ಅವರು ಸಾವಿರಾರು ಕಿ.ಮೀ ಸೈಕಲ್‍ನಲ್ಲಿ ಸಂಚರಿಸಿ ಬಹುಜನರಲ್ಲಿ ಜಾಗೃತಿ ಮೂಡಿಸಿ ಅವರಿಗೆ ರಾಜಕೀಯ ಶಕ್ತಿ ನೀಡಿದವರು ಕಾನ್ಸಿರಾಂ ಎಂದರು.
ದೇಶದ ಅದಮ್ಯ ಚೇತನವಾದ ಕಾನ್ಸಿರಾಂ ಸಾಹೇಬರನ್ನು ಬಹುಜನರು ದೇವರೆಂದು ಪೂಜಿಸಬೇಕು ಅವರ ಕನಸನ್ನು ನನಸಾಗಿಸುವುದು ಮತ್ತು ರಾಷ್ಟ್ರದ ಆಡಳಿತದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ರಾಜಿರಹಿತ ಹೋರಾಟ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಉತ್ತರಪ್ರದೇಶದ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಸೋತಿರಬಹುದು ಆದರೆ ಮುಖಂಡರು ಮತ್ತು ಕಾರ್ಯಕರ್ತರು ಸತ್ತಿಲ್ಲ ಅದು ಮುಂದೊಂದು ದಿನ ದೇಶದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.
ಪಕ್ಷದ ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್, ಜಿಲ್ಲಾ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್ ಮಾತನಾಡಿದರು, ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಸಂಯೋಜಕಿ ಕೆ.ಎಸ್.ಮಂಜುಳಾ. ಪಕ್ಷದ ಮುಖಂಡರಾದ ನವೀನ್, ಗಿರೀಶ್, ಸೋಮಶೇಖರ್, ಸಿದ್ದಪ್ಪ, ಹೊನ್ನಪ್ಪ, ಜೋಸೇಫ್ ಉಪಸ್ಥಿತರಿದ್ದರು.










