ಐಟಿ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ – ಬಾಕ್ಸ್​ಗಳಲ್ಲಿ ಕಂತೆ-ಕಂತೆ ಹಣ ಪತ್ತೆ…

55
firstsuddi

ಬೆಂಗಳೂರು: ನಗರದಲ್ಲಿ ತಡರಾತ್ರಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಹಾಗೂ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ದಂಪತಿ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, 23 ಬಾಕ್ಸ್​ಗಳಲ್ಲಿದ್ದ 42 ಕೋಟಿ ರೂಪಾಯಿ ಸೀಜ್ ಮಾಡಿದ್ದಾರೆ. ಅಶ್ವಥಮ್ಮ ಅವರು ವಾರ್ಡ್ ನಂಬರ್ 95ರಲ್ಲಿ ಕಾರ್ಪೋರೇಟರ್ ಆಗಿದ್ದು, ಇದೀಗ ಅವರ ಸುಲ್ತಾನ್ ಪಾಳ್ಯದ ಮನೆಯ ಮೇಲೆ ಐಟಿ ದಾಳಿಯಾಗಿದೆ.

ದಾಳಿ ವೇಳೆ ಮನೆಯ ಬೆಡ್ರೂಂನಲ್ಲಿ 42 ಕೋಟಿ ಹಣ ಸಿಕ್ಕಿದೆ. ಬಾಕ್ಸ್ ಗಳಲ್ಲಿ 500 ರೂ. ಮುಖಬೆಲೆಯ ನೋಟಿನ ಕಂತೆಯೇ ಪತ್ತೆಯಾಗಿದೆ. 23 ಬಾಕ್ಸ್ ನಲ್ಲಿ 42 ಕೋಟಿ ಹಣ ಸಿಕ್ಕಿದ್ದು, ಒಂದೊಂದು ಬಾಕ್ಸ್ ಅಲ್ಲೂ 1ಕೋಟಿ 65 ಲಕ್ಷ ಹಣ ಕೂಡಿಡಲಾಗಿತ್ತು. ಜಸ್ಟ್ 1 ಗಂಟೆ ಕಳೆದಿದ್ದರೆ ಹಣದ ಸಮೇತ ಎಸ್ಕೇಪ್ ಆಗುತ್ತಿದ್ದರು.

ಬೆಂಗಳೂರಿನಲ್ಲಿ ಬಿಲ್ಡರ್ಸ್, ಚಿನ್ನದ ವ್ಯಾಪಾರಿಗಳು ಹಾಗೂ ಗುತ್ತಿಗೆದಾರರಿಂದ ಈ ಹಣ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಲಾದ ಹಣವನ್ನು ಬೆಂಗಳೂರಿನಿಂದ-ಚೆನ್ನೈಗೆ, ಚೆನ್ನೈಯಿಂದ-ಹೈದ್ರಬಾದ್​ಗೆ ವರ್ಗಾವಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತೆಲಂಗಾಣ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಇಲ್ಲಿ ಹಣ ಸಂಗ್ರಹಿಸಿ ಅಲ್ಲಿಗೆ ಕಳುಹಿಸಲು ಮುಂದಾಗಿದ್ದರು ಎಂಬ ಮಾಹಿತಿ ದೊರೆತಿದೆ.

ಸದ್ಯ ಐಟಿ ಅಧಿಕಾರಿಗಳು 42 ಕೋಟಿ ಹಣ ಸೀಜ್ ಮಾಡಿದ್ದು, ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಅಡಿ ಪ್ರಕರಣ ದಾಖಲೆಗೆ ಇಡಿ ತಯಾರಿ ನಡೆಸುತ್ತಿದೆ.