ಬೆಂಗಳೂರು: ಭಾರತದಲ್ಲಿ ಮುಸ್ಲಿಮರ ಮತದಾನದ ಹಕ್ಕನ್ನು ವಾಪಸ್ ಪಡೆಯುವಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಒಕ್ಕಲಿಗ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಇಂದು ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 299 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಶ್ರೀಗಳ ಹೇಳಿಕೆ ಪ್ರಚೋದನಕಾರಿಯಾಗಿದ್ದು, ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಅಪಾಯ ಉಂಟು ಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ಮುಸ್ಲಿಮರ ಮತದಾನದ ಹಕ್ಕನ್ನು ವಾಪಸ್ ಪಡೆಯಬೇಕೆಂದು ಸ್ವಾಮೀಜಿ ಮಂಗಳವಾರ ನೀಡಿದ್ದ ಹೇಳಿಕೆ ಕರ್ನಾಟಕದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ವಕ್ಫ್ ಮಂಡಳಿಯು ರೈತರಿಗೆ ನೀಡಿರುವ ನೋಟಿಸ್‍ಗಳನ್ನು ಖಂಡಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಯೋಜಿತವಾಗಿರುವ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಮಂಗಳವಾರ ಬೆಂಗಳೂರಿನಲ್ಲಿ ರೈತ ಘರ್ಜನೆ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು. ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಮುಖ್ಯಸ್ಥರಾಗಿರುವ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.