ಕನ್ನಡದ ‘ಮುದ್ದುಲಕ್ಷ್ಮಿ’ ಧಾರಾವಾಹಿ ನಟ ಚರಿತ್ ಬಾಳಪ್ಪ ಬಂಧನ.

26

ಬೆಂಗಳೂರು: ಲೈಂಗಿಕ ಕಿರುಕುಳ ಆರೋಪದ ಮೇಲೆ ಕಿರುತೆರೆ ನಟ ಚರಿತ್ ಬಾಳಪ್ಪ ಎಂಬುವವರನ್ನು ಆರ್‍ಆರ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕನ್ನಡದಲ್ಲಿ ‘ಮುದ್ದುಲಕ್ಷ್ಮಿ’ ಸೇರಿದಂತೆ ಕೆಲವು ಸೀರಿಯಲ್‍ನಲ್ಲಿ, ತೆಲುಗಿನಲ್ಲೂ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಅವರ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಚರಿತ್ ಬಾಳಪ್ಪ ಮೇಲಿದೆ. ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆ ಎಂದು ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ಯುವತಿ ವಾಸ ಮಾಡುತ್ತಿದ್ದ ಮನೆಗೆ ಸಹಚರರ ಜೊತೆ ನುಗ್ಗಿದ ಚರಿತ್ ಬಾಳಪ್ಪ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ ಯುವತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪ ಇದೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ಚರಿತ್ ಗೆ ಈಗಾಗಲೇ ವಿವಾಹವಾಗಿ ಡಿವೋರ್ಸ್ ಕೂಡ ಆಗಿದೆ. ವಿಚ್ಛೇದನದ ನಂತರವೂ ಮಾಜಿ ಪತ್ನಿ ಜೊತೆ ಜಗಳ ಮಾಡಿಕೊಂಡ ಆರೋಪದ ಮೇಲೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.