ಕನ್ನಡಿಗರು ಮಾತೃಭಾಷೆಯಲ್ಲೇ ದೈನಂದಿನ ವ್ಯವಹಾರವನ್ನು ನಡೆಸಿದಾಗ ಮಾತ್ರ ರಾಜ್ಯದಲ್ಲಿ ಕನ್ನಡ ಉಳಿಯುತ್ತದೆ: ಸೂರಿ ಶ್ರೀನಿವಾಸ್.

75

ಚಿಕ್ಕಮಗಳೂರು: ಕನ್ನಡಿಗರು ಸ್ವಾಭಿಮಾನದಿಂದ ತಮ್ಮ ಮಾತೃಭಾಷೆಯಲ್ಲೇ ದೈನಂದಿನ ವ್ಯವಹಾರವನ್ನು ನಡೆಸಿದಾಗ ಮಾತ್ರ ರಾಜ್ಯದಲ್ಲಿ ಕನ್ನಡ ಉಳಿಯುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಹಿರೇಮಗಳೂರಿನ ಶ್ರೀದೇವಿ ಭವನದಲ್ಲಿ ನಿನ್ನೆ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಆಂಗ್ಲ ಭಾಷೆಯ ಅತಿಯಾದ ವ್ಯಾಮೋಹ ಮತ್ತು ಸ್ವಾಭಿಮಾನದ ಕೊರತೆಯಿಂದಾಗಿ ರಾಜ್ಯದಲ್ಲಿಂದು ಕನ್ನಡ ದಿನೇ ದಿನೇ ಸೊರಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿಂದು ಕೇವಲ ಶೇ.26ರಷ್ಟು ಕನ್ನಡಿಗರಿದ್ದಾರೆ. ಉಳಿದ ಶೇ.74 ರಷ್ಟು ಅನ್ಯ ಭಾಷಿಗರಿದ್ದು ಅಲ್ಲಿ ಕನ್ನಡಿಗರನ್ನು ಮತ್ತು ಕನ್ನಡವನ್ನು ಹುಡುಕುವ ದುಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.

ಕನ್ನಡ ಈ ನೆಲದ ಭಾಷೆ, ನಮ್ಮ ಅಸ್ಮಿತೆ. ಅದಕ್ಕೆ 2500 ವರ್ಷಗಳ ಇತಿಹಾಸವಿದೆ. ಅದು ಉಳಿದರೆ ಮಾತ್ರ ಈ ನೆಲದ ಸಂಸ್ಕೃತಿ ಉಳಿಯುತ್ತದೆ ಎಂದರು.

ಆಂಗ್ಲ ಭಾಷೆಯನ್ನು ಕಲಿತರೆ ಮಾತ್ರ ನಾವು ದೊಡ್ಡವರಾಗುತ್ತೇವೆ ಎನ್ನುವುದು ತಪ್ಪು ಕಲ್ಪನೆ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಸಹ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಚಂದ್ರಯಾನವನ್ನು ಯಶಸ್ವಿಗೊಳಿಸಿದ ಇಸ್ರೋ ಸಂಸ್ಥೆಯ ವಿಜ್ಞಾನಿಗಳೆಲ್ಲ ಓದಿದ್ದು, ಸರ್ಕಾರಿ ಶಾಲೆಯಲ್ಲಿ. ಅದೂ ಕನ್ನಡ ಮಾಧ್ಯಮದಲ್ಲಿ ಎಂದು ತಿಳಿಸಿದರು.

ರಾಜ್ಯದಲ್ಲಿ ಕನ್ನಡ ಉಳಿದು ಬೆಳೆಯಬೇಕಾದರೆ, ನಾವು ಯಾವುದೇ ಭಾಷೆಯನ್ನು ಬಳಸಿದರೂ ಪರವಾಗಿಲ್ಲ. ಆದರೆ, ಈ ನೆಲದ ಭಾಷೆಗೆ ಹೆಚ್ಚು ಮಹತ್ವ ಮತ್ತು ಮನ್ನಣೆಯನ್ನು ಕೊಡಬೇಕು ಎಂದ ಅವರು, ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಮಹಿಳೆಯರನ್ನೂ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಮಹಿಳಾ ಘಟಕದ ನೂತನ ಪದಾಧಿಕಾರಿಗಳು ತಿಂಗಳಿಗೊಂದು ಸಣ್ಣ ಸಣ್ಣ ಕಾರ್ಯಕ್ರಮಗಳನ್ನಾದರೂ ಮಾಡುವ ಮೂಲಕ ಕನ್ನಡವನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಕಸಾಪ ಅಧ್ಯಕ್ಷ ಬಿ.ಹೆಚ್.ಸೋಮಶೇಖರ್ ಮಾತನಾಡಿ, ನೂತನ ಪದಾಧಿಕಾರಿಗಳು ವರ್ಷವಿಡೀ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡದ ಅಸ್ಮಿತೆಯನ್ನು ಕಾಪಾಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ, ಮಹಿಳೆಯರು ಕೇವಲ ಅಡುಗೆಮನೆಗಷ್ಟೇ ಸೀಮಿತರಾಗದೇ, ಅದರಿಂದ ಹೊರಬಂದು ಕನ್ನಡವನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನೂತನ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ನೂತನ ಅಧ್ಯಕ್ಷೆ ಹೆಚ್.ಕೆ.ವಿಜಯಲಕ್ಷ್ಮಿ ವಿಶ್ವನಾಥ್ ಮಾತನಾಡಿ, ನಾಡು, ನುಡಿ, ನೆಲ ಜಲದ ರಕ್ಷಣೆಗೆ ಪ್ರಾಮಾಣಿಕವಾಗಿ ದುಡಿಯುವುದಾಗಿ ತಿಳಿಸಿದರು.

ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರೂಪಾ ನಾಯಕ್, ಕಡೂರು ತಾಲೂಕು ಅಧ್ಯಕ್ಷೆ ಲತಾರಾಜಶೇಖರ್, ವೀಣಾ ಮಲ್ಲಿಕಾರ್ಜುನ್, ಸಚಿನ್, ಪ್ರಭು, ಪದ್ಮಾ ಮೋಹನ್, ಶೈಲಾ ಬಸವರಾಜ್, ಮಹಾಲಕ್ಷ್ಮಿ ನಾಗರಾಜ್ ಉಪಸ್ಥಿತರಿದ್ದರು.