ಚಿಕ್ಕಮಗಳೂರು-ಜಿಲ್ಲೆಯ ಬಯಲು ಸೀಮೆಗೆ ನೀರುಣಿಸುವ ಕರಗಡ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಪರಿಷತ್ ಸದಸ್ಯ ಸೋದರರಾದ ಎಸ್.ಎಲ್.ಧರ್ಮೇಗೌಡ ಮತ್ತು ಎಸ್.ಎಲ್.ಭೋಜೇಗೌಡ ನೇತೃತ್ವದ ಸ್ಥಳೀಯ ರೈತರು ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರ ನಿಯೋಗದೊಂದಿಗೆ ವಿಧಾನಸೌಧದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರಗಡ ಏತ ನೀರಾವರಿ ಯೋಜನೆ ಕಾಮಗಾರಿಗೆ 17.5 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು, ಬಯಲುಸೀಮೆಯ ರೈತರಿಗೆ ನೀರನ್ನು ಒದಗಿಸುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ 200 ಹೆಚ್.ಪಿ ಮೋಟಾರ್ ಹಾಗೂ ಪ್ರತ್ಯೇಕ ಟ್ರಾನ್ಸ್‍ಫಾರ್ಮರ್ ಅಳವಡಿಸಿ ನೀರನ್ನು ಲಿಫ್ಟ್ ಮಾಡುವಂತೆ ಆದೇಶಿಸಿದರು.
2007ರಲ್ಲಿ ಆರಂಭಗೊಂಡ ಯೋಜನೆ ಕಾಮಗಾರಿ 11 ವರ್ಷಗಳಷ್ಟು ಸುಧೀರ್ಘ ಕಾಲ ವಿಳಂಬವಾದ ಬಗ್ಗೆ ಹಾಗೂ ಮೊದಲನೇ ಹಂತದ ಕಾಮಗಾರಿಯಲ್ಲಿ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ನಿರ್ದೇಶಿಸಿದರು.
ಇದೇ ವೇಳೆ ಯೋಜನೆ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಸದಾ ಬರಗಾಲದ ದವಡೆಗೆ ಸಿಲುಕಿ ನಲುಗುತ್ತಿರುವ ಬಯಲುಸೀಮೆಯ ರೈತರಿಗೆ ನೀರೊದಗಿಸುವಂತೆ ವಿಧಾನಪರಿಷತ್ ಸದಸ್ಯ ಸೋದರರಾದ ಎಸ್.ಎಲ್.ಧರ್ಮೇಗೌಡ ಮತ್ತು ಭೋಜೇಗೌಡ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಸದ್ಯದಲ್ಲೇ ಯೋಜನೆ ಕಾಮಗಾರಿ ಪ್ರದೇಶಕ್ಕೆ ತಾವೇ ಖುದ್ದು ಭೇಟಿ ನೀಡಿ ಪರಿಶೀಲಿಸುವುದರ ಜೊತೆಗೆ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಬಯಲುಸೀಮೆಯ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಜಿಲ್ಲಾ ರೈತ ಸಂಘದ ಮುಖಂಡರಾದ ಆರ್.ಆರ್.ಮಹೇಶ್, ಗುರುಶಾಂತಪ್ಪ, ಸಿಪಿಐ ಮುಖಂಡ ಬಿ.ಅಮ್ಜದ್ ಸಭೆಯಲ್ಲಿ ಪಾಲ್ಗೊಂಡಿದ್ದರು.