ಬೆಳಗಾವಿ: ನವೆಂಬರ್ 1 ರಂದು ಕರ್ನಾಟಕ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಆಚರಿಸಿಸಲಾಗುತ್ತದೆ. ಆದರೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿವರ್ಷ ಕರಾಳ ದಿನ ಆಚರಿಸುತ್ತಾರೆ. ಈ ವರ್ಷ ‘ಕರಾಳ ದಿನ’ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಿದ ಬಳಿಕವೂ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಬೃಹತ್ ‘ಕರಾಳ ದಿನ’ ರ್ಯಾಲಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಕರಾಳ ದಿನಾಚರಣೆಯಲ್ಲಿ ಭಾಗವಿಸಿದ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಎಂಇಎಸ್‍ನ ಕರ್ನಾಟಕ ವಿರೋಧಿ ನಿಲುವಿನಿಂದ ಆಕ್ರೋಶ ವ್ಯಕ್ತಪಡಿಸಿರುವ ಪಿಡಬ್ಲ್ಯುಡಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡವರೆಲ್ಲರೂ ಶೀಘ್ರದಲ್ಲೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಎಂಇಎಸ್ ನ ತೊಂದರೆ ಈ ಹಿಂದೆ ಇದ್ದಷ್ಟು ಈಗ ಇಲ್ಲ. ಕನ್ನಡಿಗರ ಸಂಭ್ರಮದ ಮುಂದೆ ಅವರು ಮಂಕಾಗಿ ಹೋಗಿದ್ದಾರೆ. ಬೆರಳೆಣಿಕೆಯಷ್ಟು ಜನ ಮೆರವಣಿಗೆ ಮಾಡಿರಬಹುದು. ಅವರನ್ನು ನೇರವಾಗಿ ಬಂಧಿಸುವುದು ಸರಿಯಲ್ಲ. ರಾಜ್ಯೋತ್ಸವ ಸಂದರ್ಭದಲ್ಲಿ ಅದು ಗಲಾಟೆಗೆ ಎಡೆಮಾಡಿ ಕೊಡುತ್ತದೆ. ನಂತರ ಪೊಲೀಸರು ಸೂಕ್ತ ಕ್ರಮ ಜರುಗಿಸುತ್ತಾರೆ. ಯಾರೆಲ್ಲಾ ಮೆರವಣಿಗೆ ನಡೆಸಿದ್ದಾರೆ, ನಾಡ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.