ಕರೋನಾ; ಬರ್ಬಾದಾಯ್ತು ಮಹಿಳೆಯರ ಬದುಕು…!

359
firstsuddi

ಡಾ. ಎಂ.ಎಸ್. ಮಣಿ

ಕೊರೋನಾ ಸೋಂಕಿನ ಕೇಡಿಗಿಂತ ಅದರಿಂದಾದ ಅಡ್ಡಪರಿಣಾಮಗಳು ಅಧಿಕ. ಇದು ತಮಾಷೆಗಾಗಿ ಅಥವಾ ಯಾವುದೇ ಪೂರ್ವಾಗ್ರಹವನ್ನು ಇಟ್ಟುಕೊಂಡು ಹೇಳುತ್ತಿಲ್ಲ. ಕೊರೋನಾ ವೈರಸ್ ಹರಡುವ ಆರಂಭದಲ್ಲಿ ತಡೆಗಟ್ಟಲು ಕೈಗೊಂಡ ಲಾಕ್‍ಡೌನ್ ಹಲವರ ಜೀವನೋಪಾಯವನ್ನು ಕಿತ್ತುಕೊಂಡಿದೆ. ಇದರಂತೆ ಅಂದಾಜು ಶೇಕಡ 81ರಷ್ಟು ದುಡಿಯುವ ಜನ ಭೀತಿಯ ಅಲೆಗೆ ಸಿಲುಕಿದ್ದಾರೆ. ಹಲವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಹಾಗೆಯೇ ಬಡತನದ ಬೇಗೆಗೂ ಜಾರಿ ಬಿದ್ದಿದ್ದಾರೆ. ಇಂತಹವರು ಅಂದಾಜು 100 ಮಿಲಿಯನ್ ಇದ್ದಾರೆ. ಇಂತಹ ಭೀರಕತೆಗೆ ಕುಲಕಸುಬು ಆಧಾರಿತ ಸಮುದಾಯಗಳು, ಅವಕಾಶವಂಚಿತ ಸಮುದಾಯಗಳು ಮತ್ತು ಮಹಿಳೆಯರೇ ಹೆಚ್ಚಾಗಿ ಸಿಲುಕಿದ್ದಾರೆ. ಅಂದಾಜು ಶೇಕಡ 40ರಷ್ಟು ಮಹಿಳೆಯರು ಉದ್ಯೋಗದಿಂದ ವಂಚನೆಗೊಳಗಾಗಿದ್ದಾರೆ. ಇಂತಹವವರು ಪ್ರವಾಸೋದ್ಯಮ, ಬೃಹತ್ ಪ್ರಮಾಣದ ಮಾಲ್, ಹೋಟೆಲ್, ಶಿಕ್ಷಣ ಸಂಸ್ಥೆ, ಸಣ್ಣಪುಟ್ಟ ವ್ಯಾಪಾರ-ವಹಿವಾಟಿನ ಮಳಿಗೆಗಳಲ್ಲಿ ದುಡಿದು ತಿನ್ನುವವರೇ ಹೆಚ್ಚಾಗಿದ್ದಾರೆ. ಒಟ್ಟಾರೆ ಕೊರೋನಾ ಸೋಂಕಿನ ಹಾವಳಿಯಿಂದಾಗಿ ಮಹಿಳೆಯರು ಆರ್ಥಿಕವಾಗಿ ತೀವ್ರ ಭೀಕರತೆಗೆ ಒಳಗಾಗಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ ದಶಕಗಳ ಕಾಲದಿಂದ ಲಿಂಗ ಸಮಾನತೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸಿದ್ದ ಪ್ರಗತಿಯ ಬಹುಭಾಗವನ್ನು ಕೊರೋನಾ ಸೋಂಕು ಕುಗ್ಗಿಸಿಹಾಕಿದೆ.

ಆದರೂ, ಕೊರೋನಾ ಬಿಕ್ಕಟ್ಟನ್ನು ಜಗತ್ತಿನಾದ್ಯಂತ ಪುರುಷರಿಗಿಂತ, ಮಹಿಳೆಯರೇ ಹೆಚ್ಚು ಉತ್ತಮವಾಗಿ ನಿರ್ವಹಿಸಿದ್ದಾರೆ. ಮಹಿಳೆಯರು ಅಧಿಕಾರದ ಚುಕ್ಕಾಣಿ ಹಿಡಿದಿರುವ ದೇಶಗಳಲ್ಲಿ, ರಾಜ್ಯಗಳಲ್ಲಿ ಇತರೆಡೆಗಿಂತ `ಸಾವಿನದರ’ ಕೂಡ ಕಡಿಮೆಯೇ ಇದೆ. ಹೀಗಾಗಿಯೇ ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ಜರ್ಮನಿಯ ಚಾನ್ಸೆಲರ್ ಆ್ಯಂಜೆಲಾ ಮಾರ್ಕೆಲ್, ನ್ಯೂಜಿಲೆಂಡ್‍ನ ಪ್ರಧಾನಿ ಜೆಸಿಂಡಾ ಆರ್‍ಡ್ರನ್, ತೈವಾನ್‍ನ ಅಧ್ಯಕ್ಷೆ ತ್ಸೈ ಇಂಗ್ ವೆನ್, ಡೆನ್ಮಾರ್ಕ್‍ನ ಪ್ರಧಾನಿ ಮೆಟ್ಟೆ ಫ್ರೆಡರಿಕ್‍ಸನ್, ಫಿನ್‍ಲ್ಯಾಂಡ್‍ನ ಪ್ರಧಾನಿ ಸನ್ನಾಮಾರ್ಲಿನ್ ಅವರುಗಳು ಜನಾನುರಾಗಿಯಾಗಿದ್ದಾರೆ. ಇದನ್ನೇಕೆ ಹೇಳುತ್ತಿರುವೆನೆಂದರೆ, ಗಾಜಿಯಾಬಾದ್ ಜಿಲ್ಲೆಯ ಮೋದಿನಗರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿರುವ ಸೌಮ್ಯ, ಕೋವಿಡ್ ಹಿನ್ನೆಲೆಯಲ್ಲಿ ತಮ್ಮ ಹೆರಿಗೆ ರಜೆಯನ್ನು 22 ದಿನಗಳಿಗೆ ಮೊಟಕುಗೊಳಿಸಿ ಸೇವೆಗೆ ಹಾಜರಾಗಿದ್ದಾರೆ. “ಐಎಎಸ್ ಅಧಿಕಾರಿಯಾದ ನನಗೆ ಒಂದಷ್ಟು ಜವಾಬ್ದಾರಿಗಳಿವೆ. ಕೊರೋನಾ ನಿರ್ವಹಣೆಗಾಗಿ ನಾನಿಲ್ಲಿ ನೇಮಕವಾಗಿದ್ದೇನೆ. ಗ್ರಾಮೀಣ ಭಾಗಗಳಲ್ಲಿ ಮಗು ಹೆತ್ತ ಮಾರನೇ ದಿನದಿಂದಲೇ ಆಕೆ ಮಗುವಿನ ಪಾಲನೆ ಮಾಡುವುದರ ಜೊತೆಗೆ ಮನೆಕೆಲಸಗಳನ್ನು ನಿರ್ವಹಿಸುತ್ತಾಳೆ. ಈ ಶಕ್ತಿಯನ್ನು ದೇವರು ನೀಡಿರುತ್ತಾನೆ. ನಾನೂ ಕೂಡ ಮಗು ಆರೈಕೆಯ ಜೊತೆಗೆ ನನ್ನ ಕರ್ತವ್ಯನಿರ್ವಹಿಸುತ್ತೇನೆ’’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂತಹ ಆದರ್ಶ ಮತ್ತು ಸೇವಾನಿರತ ಮಹಿಳೆಯರ ಬಗ್ಗೆ ತುಲನಾತ್ಮಕ ವಿಶ್ಲೇಷಣೆ ನಡೆದೇ ಪುರುಷರಿಗಿಂತ ಮಹಿಳೆ ಅತ್ಯುತ್ತಮ ಸಾಧನೆಗೈದಿರುವುದು ಬೆಳಕಿಗೆ ಬಂದಿದೆ.

ಆರ್ಥಿಕ ನೀತಿ ಸಂಶೋಧನೆ ಕೇಂದ್ರ ಮತ್ತು ವಿಶ್ವ ಆರ್ಥಿಕ ವೇದಿಕೆಯು 194 ದೇಶಗಳ ನಾಯಕರು ಕೊರೋನಾ ಶಮನಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ವಿಶ್ಲೇಷಿಸಿ ವರದಿ ಪ್ರಕಟಿಸಿದೆ. ಸಾಮಾನ್ಯವಾಗಿ ಮಹಿಳೆ ಮತ್ತು ಪುರುಷರ ಆಡಳಿತ ಶೈಲಿಯಲ್ಲಿ ವ್ಯತ್ಯಾಸ ಇರುತ್ತದೆ. ಆದರೆ ಇಲ್ಲಿ ಪೂರ್ವಭಾವಿ ಮತ್ತು ಸಂಯೋಜಿತ ಪ್ರಕ್ರಿಯೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. ಹೀಗಾಗಿಯೇ ಮಹಿಳಾ ನಾಯಕಮಣಿಗಳೇ `ಅತ್ಯುತ್ತಮ’ ಎಂಬ ಪರಿಗಣನೆಗೂ ಬಂದಂತಿದೆ. ಇಂತಹದ್ದೊಂದು ವರದಿಯನ್ನು ಲಿವರ್‍ಪೂಲ್ ವಿಶ್ವವಿದ್ಯಾಲಯದ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಸುಪ್ರಿಯ ಗಾರಿಕಿಪಟ್ಟಿ ಮತ್ತು ರೀಡಿಂಗ್ ವಿಶ್ವವಿದ್ಯಾಲಯದ ಉಮಾ ಕಂಭಂಪಟ್ಟಿ ಅವರು ಸಿದ್ಧಪಡಿಸಿಕೊಟ್ಟಿರುತ್ತಾರೆ. ಸಾವು-ನೋವುಗಳನ್ನು ತಡೆಯಲು ಅತ್ಯಂತ ತ್ವರಿತವಾಗಿ, ನಿರ್ಣಾಯಕ ಕ್ರಮಗಳನ್ನು ಪುರುಷರಿಗಿಂತ, ಮಹಿಳಾ ನಾಯಕಿಯರೇ ಕೈಗೊಂಡಿರುವರೆಂದು ಸಂದರ್ಶನ ಒಂದರಲ್ಲಿ ತಿಳಿಸಿಯೂ ಇದ್ದಾರೆ.

ಇಂದಿನ ಸಂದರ್ಭಗಳನ್ನು ಎದುರಿಸಲು ಮಹಿಳಾ ನಾಯಕಿಯರು ಮುಂದಾಗಿಯೇ ಸಜ್ಜಾಗಿದ್ದಾರೆ. ಇಲ್ಲವಾದಲ್ಲಿ ದೀರ್ಘಕಾಲದ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು. ಇವರುಗಳ ಮುನ್ನೆಚ್ಚರಿಕೆ ಕ್ರಮಗಳಿಂದ ವಿಶ್ವದೆಲ್ಲೆಡೆ ಹಲವು ಜೀವಗಳು ಬದುಕುಳಿದಿವೆ. ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಮೇ 19ರ ವರೆಗೂ ಅಸುನೀಗಿದವರ ಪ್ರಕರಣಗಳಲ್ಲಿ ಕೈಗೊಂಡ ನೀತಿ ಮತ್ತು ತಂತ್ರದ ಕ್ರಮಗಳ ಫಲಿತಾಂಶವನ್ನು ವಿಶ್ಲೇಷಿಸಿ, ಅಸ್ಥಿರ ಮತ್ತು ವಿಶ್ವಾಸಾರ್ಹ ಹೋಲಿಕೆಗಳನ್ನು ಮಾಡಿ ವರದಿ ಸಿದ್ಧಪಡಿಸಲು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದಲ್ಲದೆ ಜನಸಂಖ್ಯೆ, ಜನಸಾಂದ್ರತೆ, ನಿವ್ವಳ ದೇಸಿ ಉತ್ಪನ್ನ, ಹಿರಿಯ ನಾಗರಿಕರ ಸಂಖ್ಯೆ, ಲಿಂಗಸಮಾನತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ, ಸಮಾಜದೊಳಗಿನ ಸಮಾನತೆಯ ಮಾನದಂಡಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗಿದೆ.

ಇದೇನೇ ಇದ್ದರೂ, ದೀಪದ ಕೆಳಗಡೆ ಕತ್ತಲು ಎಂಬಂತೆ ಅತಿ ಹೆಚ್ಚು ಹಾನಿಗೊಳಗಾಗಿರುವುದು ಮಹಿಳೆಯರು. ಅದರಲ್ಲೂ ಮಹಿಳಾ ಕೆಲಸಗಾರರು. ಇವತ್ತು ಸಂಕಷ್ಟದ ಬಾಣಲೆಯಲ್ಲಿ ದುಡಿಯುವ ಮಹಿಳೆ ಸಿಲುಕಿದ್ದಾಳೆ. ಅದರಲ್ಲೂ ಮರಗೆಣಸಿನ ತೋಟಗಳಲ್ಲಿ, ಚಹ ತೋಟಗಳಲ್ಲಿ, ಇಟ್ಟಿಗೆ ಕಾರ್ಖಾನೆಗಳಲ್ಲಿ, ಕೋಳಿ ಫಾರಂಗಳಲ್ಲಿ, ಕಲ್ಲು ಗಣಿಗಾರಿಕೆಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಸ್ಥಿತಿ ಯಾತನಾದಾಯಕವಾಗಿದೆ. ಮುಖ್ಯವಾಗಿ ಚಹ ತೋಟಗಳಲ್ಲಿ ದುಡಿಯುವ ಮಹಿಳೆಯರಂತೂ ತೀವ್ರತರದ ಶೋಷಣೆಗೆ ಬಲಿಯಾಗಿದ್ದಾರೆ. ಅಸ್ಸಾಂ ಚಹಾದ ಬಗ್ಗೆ ಮಾತನಾಡುವ ಪ್ರಧಾನಿ, ಚಹಾ ತೋಟದ ಕೆಲಸಗಾರರ ದುರಾವಸ್ಥೆಯನ್ನು ಸರಿಪಡಿಸಬೇಕೆಂದು ಅಸ್ಸಾಂನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆಗ್ರಹಿಸಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದಾಗಿದೆ.

ಇಂತಹ ನತದೃಷ್ಟರಲ್ಲಿ ಬಹುತೇಕರು ದಲಿತರು ಮತ್ತು ಬುಡಕಟ್ಟು ವರ್ಗದವರೇ ಸೇರಿದ್ದಾರೆ. ಮಹಾರಾಷ್ಟ್ರದ ತಾಡೋಬದ ಗೊಂಡ ಅರಣ್ಯವಾಸಿಗಳು ಮತ್ತು ಛೋಟಾ ನಾಗ್ಪುರದ ಪರಿಶಿಷ್ಟ ಬುಡಕಟ್ಟಿನ ಕುರಿಗಾಹಿಗಳು, ನೇಪಾಳದ ದಲಿತರು, ಪಶ್ಚಿಮ ಬಂಗಾಳದ ದಲಿತ ಅಮಾಯಕರು ಚಹಾ ತೋಟಗಳ ಕೂಲಿಕಾರರಾಗಿದ್ದಾರೆ. ಇವರುಗಳು ಮಾನವ ನಿರ್ಮಿತ ಲೋಪ, ಲೋಭ, ಸಂಚು, ಅನಿವಾರ್ಯತೆ, ನತದೃಷ್ಟತೆಗೆ ಬಲಿಯಾಗಿಯೇ ಚಹಾ ತೋಟಗಳಲ್ಲಿ, ಮರಗೆಣಸಿನ ತೋಟಗಳಲ್ಲಿ, ಇಟ್ಟಿಗೆ ಕಾರ್ಖಾನೆಗಳಲ್ಲಿ, ಗಣಿಗಾರಿಕೆಗಳಿಗೆ ಸಿಲುಕಿದ್ದಾರೆ. ಇವರೆಲ್ಲರದ್ದೂ ಕುಟುಂಬ ಆಧಾರಿತ ಅಂದರೆ ಗಂಡ-ಹೆಂಡತಿ, ಮಕ್ಕಳು ಇಲ್ಲವೇ ಮನೆಯೊಡತಿ, ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಾಗಿ ಸೇರಿ ದುಡಿಯುವ ಜನ. ಹೇಯ ಎಂದರೆ, ಮಕ್ಕಳಿಗೂ ಇಂತಿಷ್ಟು ಕೂಲಿ ಎಂದು ಕೊಟ್ಟು ಚಹಾ ತೋಟಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ.

ಕೊರೋನಾ ಸೋಂಕೆಂಬುದು ನಮ್ಮ ದೇಶ ಮಾತ್ರವಲ್ಲ, ಜಗತ್ತಿನ ಆರ್ಥಿಕತೆಯನ್ನೇ ಭಾದಿಸಿದೆ. ಇದರ ಕರಿನೆರಳು ಕಡಿಮೆ ವೇತನ ಪಡೆಯುವ ಮಹಿಳೆಯರ ಮೇಲೆ ಹೆಚ್ಚು ಬೀರಿದೆ. ನಿರ್ದಿಷ್ಟವಾಗಿ ಮಹಿಳೆಯರು ಕಾರ್ಯನಿರ್ವಹಿಸುವ ವಲಯಗಳು ಹೆಚ್ಚು ಭಾದಿತಗೊಂಡಿವೆ. ಹಿಂದೆಂದೂ ಕಂಡಿರದಷ್ಟು ಮಾನವೀಯ ಬಿಕ್ಕಟ್ಟು ಇದೀಗ ಉಲ್ಬಣಗೊಂಡಿದೆ. ಇದು ವ್ಯವಸ್ಥೆಗೆ ಒಂದು ಸವಾಲಾಗಿ ಕಾಡುತ್ತಿದೆ.

ಆದರೆ, ಚೀನಾ ಮಾತ್ರ ತನ್ನ ಜಿಡಿಪಿಯನ್ನು ಶೇಕಡ 4ಕ್ಕಿಂತ ಹೆಚ್ಚು ಹೆಚ್ಚಿಸಿಕಂಡು ಕೂತಿದೆ. ನಮ್ಮ ದೇಶದಲ್ಲಿ ಲಾಕ್‍ಡೌನ್‍ನಿಂದ ಜನ ದುಡಿಯುವ ಮಾರ್ಗ ಕಳೆದುಕೊಂಡಿದ್ದಾರೆ. ಒಂದೆಡೆ ಆರ್ಥಿಕತೆಯೇ ಸ್ಥಗಿತಗೊಂಡುಬಿಟ್ಟಿದೆ. ಇದನ್ನು ಮತ್ತೆ ಹಳಿಗೆ ತರುವ ಸೆಣಸಾಟ ನಡೆದಿದೆ. ಇತ್ತೀಚೆಗೆ ಭವಿಷ್ಯವಾಣಿಯೊಂದು ಸೂಚಿಸಿದಂತೆ ನಮ್ಮ ದೇಶದ ಆರ್ಥಿಕತೆ ಶೇಕಡ 7.5ರಷ್ಟು ವಿರೋಧಾಭಾಸವನ್ನು ಸೂಚಿಸಿದೆ. ಹಾಗೆಯೇ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಪ್ರಕಾರ ಅಂದಾಜು 400 ಮಿಲಿಯನ್ ಜನ ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ. ಬಹುತೇಕ ಇವರೆಲ್ಲರೂ ಅನೌಪಚಾರಿಕ ವಲಯದಲ್ಲಿ ದುಡಿಯುವವರಾಗಿದ್ದಾರೆ. ಸೆಂಟರ್ ಫರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್ ಲಿಮಿಟೆಡ್ ಪ್ರಕಾರ ಶೇಕಡ 40ರಷ್ಟು ಮಹಿಳೆಯರು ಶೇಕಡ 29ರಷ್ಟು ಪುರುಷರು ಉದ್ಯೋಗ ಕಳೆದುಕೊಂಡಿದ್ದಾರೆ.

ಇದರ ಅಂದಾಜಿನಿಂದಾಗಿಯೇ, ಚಹಾ ತೋಟಗಳಲ್ಲಿ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟರೆ, “ತುರ್ತು ಆರೋಗ್ಯ ಮಾರ್ಗದರ್ಶಿ’’ಯನ್ನು ಅನುಸರಿಸುತ್ತೇವೆಂದು ಭಾರತೀಯ ಚಹಾ ಸಂಘದವರು ಭರವಸೆ ನೀಡಿರಬೇಕು. ಹೀಗಾಗಿ ಚಹಾ ತೋಟಗಳಲ್ಲಿ ಕೆಲಸ ಪುನರಾರಂಭಗೊಂಡಿದೆ. ಇಷ್ಟಕ್ಕೂ ಚಹಾ ತೋಟಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಭಾದಿಸಿರುವುದಿಲ್ಲ. ಕಾರಣ ಅಲ್ಲಿನ ಕಾರ್ಮಿಕರು ಮೊದಲೇ ಆಹಾರದ ಕೊರತೆ, ಪೌಷ್ಠಿಕ ಆಹಾರದ ಕೊರತೆ, ಕೊಳಕು ನೀರು, ನೈರ್ಮಲ್ಯ ಪರಿಸರದಲ್ಲಿ ಬದುಕಿ ಅಭ್ಯಾಸ ಇದ್ದದ್ದರಿಂದ ಇವರುಗಳನ್ನು ಹೆಚ್ಚು ಪೀಡಿಸಿರುವುದಿಲ್ಲ. ಆದರೂ ಕಾಲರಾ, ರಕ್ತಹೀನತೆ, ಅಪೌಷ್ಠಿಕತೆಯಂತಹ ಸಮಸ್ಯೆಗಳಿಂದ ನರಳುತ್ತಿರುವ ಇವರುಗಳನ್ನು ಕೊರೋನಾ ಸೋಂಕು ಅಂಟಿಕೊಂಡರೆ ಕ್ರೂರವಾಗಿ ಹಿಂಸಿಸಲೂಬಹುದು. ಇವರುಗಳ ಒಳಿತಿಗಾಗಿ ಸರ್ಕಾರ ವಿಶೇಷ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಅಲ್ಲದೆ ಲಾಕ್‍ಡೌನ್ ಸಂದರ್ಭದಲ್ಲಿ ವೇತನ ಕಡಿತಗೊಳಿಸಬಾರದೆಂದು ಜೊತೆಗೆ ಇನ್ನಿತರ ಸೌಕರ್ಯಗಳಿಂದ ವಂಚಿತಗೊಳಿಸಬಾರದೆಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಜೊತೆ ಜೊತೆಗೆ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಹಲವು ಕಾರ್ಮಿಕ ಕಾನೂನುಗಳನ್ನು ಅಮಾನತ್ತುಪಡಿಸಿತ್ತು. ಇದು ದ್ವಂದ್ವನಡೆಯಷ್ಟೆಯಲ್ಲ, ಅಮಾನವೀಯ ಕ್ರಮ ಕೂಡ ಆಗಿದೆ.

ಇಲ್ಲಿ ಚಹಾ ತೋಟಗಳಲ್ಲಿ ದುಡಿಯುವ ಮಹಿಳೆಯರಷ್ಟೆ ಅಲ್ಲದೆ, ನರಗಳಲ್ಲಿ, ಗ್ರಾಮಗಳಲ್ಲಿ ವಾಸಿಸುವ ಮಹಿಳೆಯರಿಗೂ ಎರಡು ಬಗೆಯ ಹೊಡೆತ ಬಿದ್ದಿದೆ. ಅನೌಪಚಾರಿಕ ವಲಯದಲ್ಲಿ ಪುರುಷರಿಗಿಂತ ಕಡಿಮೆ ವೇತನಕ್ಕೆ ಮಹಿಳೆಯರು ದುಡಿಯುತ್ತಿದ್ದಾರೆ. ಇದೀಗ ಅವರ ಆದಾಯ ಮೂಲವೂ ಮುಚ್ಚಿಹೋಗಿದೆ. ಜಗತ್ತಿನೆಲ್ಲೆಡೆ ಮಹಿಳೆಯರು  ಕಾರ್ಖಾನೆಗಳಲ್ಲಿ, ಜವಳಿ ಉದ್ಯಮಗಳಲ್ಲಿ, ಕರಕುಶಲಕರ್ಮಿಗಳಾಗಿ, ಆಹಾರ ಸಂಸ್ಕರಣ ಘಟಕಗಳಲ್ಲಿ, ಬೂಟು, ಚಪ್ಪಲಿ ಉತ್ಪಾದನಾ ಘಟಕಗಳಲ್ಲಿ ದಿನಗೂಲಿಗಳಿಗಾಗಿ ದುಡಿಯುತ್ತಿದ್ದರು. ಇವೆಲ್ಲವೂ ಇದೀಗ ಮುಚ್ಚಿಹೋಗಿವೆ. ಸೇವಾಕ್ಷೇತ್ರಗಳಾದ ಮನೆಗೆಲಸ, ಅಡುಗೆ ತಯಾರಿಕೆ, ಬ್ಯೂಟಿ ಪಾರ್ಲರ್‍ಗಳಿಗೂ ಹೊಡೆತ ಬಿದ್ದಿದೆ.

ನಮ್ಮ ದೇಶದಲ್ಲಿ ಚಹಾ ತೋಟದ ಇತಿಹಾಸ ಬ್ರಿಟಿಷರ ವಸಾಹತು ಶಾಹಿಯುಗದಲ್ಲಿ ಆರಂಭವಾಯಿತು. 1857 ಮತ್ತು 1859ರಲ್ಲಿ ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತವನ್ನು ಚಹಾ ತೋಟಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳವನ್ನು ಈಶಾನ್ಯ ಭಾರತದಲ್ಲಿ ಡಾರ್ಜಿಲಿಂಗ್ ಮತ್ತು ಜಲಪೈಗುರಿಯಲ್ಲಿ ಚಹಾ ತೋಟವನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ತ್ರಿಪುರ, ಸಿಕ್ಕಿಂ, ಹಿಮಾಚಲ ಪ್ರದೇಶದಲ್ಲೂ ಚಹಾ ತೋಟವನ್ನು ನಿರ್ಮಾಣ ಮಾಡಿದರು. ಇಲ್ಲಿ ದುಡಿಯುವುದಕ್ಕಾಗಿ ಜನ ಮುಗಿಬಿದ್ದು ಬಂದಿದ್ದರು. ಇವತ್ತಿಗೂ ಚಿಕ್ಕಮಗಳೂರಿನ ಸುತ್ತಮುತ್ತಲಿನ ಕಾಫಿ, ಚಹಾ ತೋಟಗಳಲ್ಲಿ ದುಡಿಯುವ ಬಹುತೇಕರು ವಲಸಿಗರೇ ಆಗಿದ್ದಾರೆ. ಪಶ್ಚಿಮ ಬಂಗಾಳ, ಒರಿಸ್ಸಾ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಿಂದ ವಾರ್ಷಿಕ ಕೂಲಿಯ ಮೇಲೆ ದುಡಿಯಲು ಬಂದು ಸಿಲುಕಿದ್ದಾರೆ. ಇಂತಹ ದುಡಿಯುವ ಮಹಿಳೆಯರನ್ನು ಹುಡುಕಿ ಕರೆತರುವ `ಮಧ್ಯವರ್ತಿ’ಗಳಿಗೆ ಕೊರತೆ ಇಲ್ಲ.

ಈಶಾನ್ಯ ಭಾರತದ ತೆರೈ, ದೌರಾಸ್, ಉತ್ತರ ಬೆಂಗಾಲ್‍ನ ಡಾರ್ಜಿಲಿಂಗ್‍ಗಳಲ್ಲಿ 273 ಚಹಾ ತೋಟಗಳಿವೆ. ಇಲ್ಲಿ 2 ಲಕ್ಷ 60 ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಲೇಬರ್ ಬ್ಯೂರೋ ಪ್ರಕಾರ ನಮ್ಮ ದೇಶದ ಚಹಾ ತೋಟಗಳಲ್ಲಿ ಶೇಕಡ 55.9ರಷ್ಟು ಮಹಿಳಾ ಕಾರ್ಮಿಕರಿದ್ದಾರೆ. ವಾಜಪೇಯಿ, ದೇವೇಗೌಡ, ಐ.ಕೆ. ಗುಜ್ರಾಲ್, ಮನಮೋಹನ್ ಸಿಂಗ್ ಅವರುಗಳು ಪ್ರಧಾನಮಂತ್ರಿಗಳಾಗಿದ್ದಾಗ ಅಂದರೆ 1995ರಿಂದ 2010ರ ನಡುವೆ ಚಹಾ ತೋಟಗಳಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಶೇಕಡ 49.5ರಿಂದ ಶೇಕಡ 54.7ರಷ್ಟು ಹೆಚ್ಚಾಗಿದೆ.