ಕರ್ತವ್ಯ ನಿರತ ಹೆಡ್ ಕಾನ್ಸ್​​​ಟೇಬಲ್ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ಪುತ್ರನಿಂದ ಹಲ್ಲೆ…

60
firstsuddi

ದೇವದುರ್ಗ: ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಅವರ ಪುತ್ರ ಸಂತೋಷ್, ಪಿಎ ಇಲಿಯಾಸ್ ಸೇರಿದಂತೆ ಎಂಟು ಜನರು ದೇವದುರ್ಗ ಪೊಲೀಸ್ ಠಾಣೆಯ ಕರ್ತವ್ಯನಿರತ ಕಾನ್ಸ್​​​ಟೇಬಲ್ ಹನುಮಂತರಾಯ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಕಾನ್ಸ್​​​ಟೇಬಲ್ ಹನುಮಂತರಾಯ ಅವರು ನಿನ್ನೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆದಿದ್ದರು. ಟ್ರ್ಯಾಕ್ಟರ್ ತಡೆಹಿಡಿದ ವಿಚಾರಕ್ಕೆ ಶಾಸಕಿ ಪುತ್ರ ಸಂತೋಷ್ ಕಾನ್ಸ್​​​ಟೇಬಲ್ ಹನುಮಂತರಾಯ ಅವರಿಗೆ ಕರೆ ಮಾಡಿ ಟ್ರ್ಯಾಕ್ಟರ್ ಬಿಡುವಂತೆ ಹೇಳಿದ್ದಾರೆ. ಒತ್ತಡಕ್ಕೆ ಮಣಿಯದ ಕಾನ್ಸ್​​​ಟೇಬಲ್ ಹನುಮಂತರಾಯ ಅವರು ಟ್ರ್ಯಾಕ್ಟರ್ ಅನ್ನು ಪೊಲೀಸ್ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಶಾಸಕಿ ಪುತ್ರ ಸಂತೋಷ್ ಕಾನ್ಸ್​​​ಟೇಬಲ್ ಹನುಮಂತರಾಯ ಅವರನ್ನು ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ.

ಹಲ್ಲೆ ಮಾಡಿದ ಬಳಿಕ, ರಾಜಕೀಯ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಹಲ್ಲೆಗೊಳಗಾದ ಕಾನ್ಸ್​​​ಟೇಬಲ್ ಹನುಮಂತರಾಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ಸಂಬಂಧ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.