ಬೆಂಗಳೂರು: ಕಳೆದ 15 ದಿನದಿಂದ ಕರ್ನಾಟಕ ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಆದ ಅವಾಂತರಗಳಿಗೆ ಕೊನೆಯಿಲ್ಲದಂತಾಗಿದೆ. ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಪ್ರತಿದಿನ ಒಂದೊಂದೇ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ವಿಪತ್ತು ನಿರ್ವಹಣೆ ಕುರಿತು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ಮಾಡಿ ಕೆಲ ನಿರ್ಧಾರಗಳನ್ನು ಕೈಗೊಂಡಿದ್ದರು. ಅದರ ಬೆನ್ನಿನಲ್ಲೆ ಸಿಎಂ ಸಿದ್ದರಾಮಯ್ಯ ಕೂಡ ಮಳೆ ಹಾನಿ ಸಂಬಂಧ ಡಿಸಿ, ಜಿ.ಪಂ. ಸಿಇಒಗಳ ಜೊತೆ ಸಿಎಂ ಸಭೆ ಮಾಡಿ ಅವರಿಗೆ ಅನೇಕ ಸೂಚನೆಗಳನ್ನು ನೀಡಿದ್ದಾರೆ.
ಯಾವ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಉಂಟಾಗಿದೆಯೋ ಆಯಾ ಜಿಲ್ಲೆಗಳ ಡಿಸಿಗಳು ಖುದ್ದಾಗಿ ಅವರೇ ಭೇಟಿ ನೀಡಬೇಕು. ಪರಿಶೀಲನೆ ಮಾಡಿ ತಕ್ಷಣ ಪರಿಹಾರ ನೀಡಬೇಕು. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸಭೆ ಬಳಿಕ ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಸಿದ್ದರಾಮಯ್ಯ ಅವರು, ಮಳೆ ಹಾನಿ ಬಗ್ಗೆ ಡಿಸಿ, ಸಿಇಒಗಳು, ಎಸ್‍ಪಿಗಳ ಸಭೆ ಮಾಡಿದ್ದೇನೆ. ಬೆಂಗಳೂರು ಸೇರಿ ಹಲವೆಡೆ ಹಿಂಗಾರು ಮಳೆಯಿಂದ ಹಾನಿಯಾಗಿದೆ.
ರಾಜ್ಯದಲ್ಲಿ ಇದುವರೆಗೆ 25 ಜನರು ಮಳೆಯಿಂದ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ಮಳೆಯಿಂದಾಗಿ 84 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ರಾಜ್ಯದ ಹಲವೆಡೆ 2,074 ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆ ಹಾನಿಗೆ 1.20 ಲಕ್ಷ ರೂ. ಪರಿಹಾರ ನೀಡಬೇಕು. ಸಣ್ಣಪುಟ್ಟ ಹಾನಿಯಾದರೆ 50 ಸಾವಿರ ರೂ. ಪರಿಹಾರ ಕೊಡುತ್ತೇವೆ. ಈ ಪರಿಹಾರ ನವೆಂಬರ್, ಅಕ್ಟೋಬರ್ ತಿಂಗಳಲ್ಲೂ ಅನ್ವಯ ಆಗಲಿದೆ. ಜತೆಗೆ ಮನೆ ನಿರ್ಮಾಣ ಮಾಡಲು ಈಗಾಗಲೇ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.










