ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ರಾಜ್ಯಾದ್ಯಂತ ಬಹುತೇಕ ಅಭ್ಯರ್ಥಿಗಳು ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ವರ್ಷದ ಮೊದಲ ಸೂರ್ಯಗ್ರಹಣ ಹಾಗೂ ಅಮವಾಸ್ಯೆ ಕೂಡ. ಹೀಗಾಗಿ ಆಚಾರ ವಿಚಾರಗಳನ್ನು ಪಾಲಿಸುವವರು ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಕೂಡ ಅನೇಕ ಪ್ರಮುಖ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ಏಪ್ರಿಲ್ 21ರಿಂದ ನಾಮಪತ್ರಗಳ ಪರಿಶೀಲನೆ ನಡೆಯುತ್ತೆ. ಏಪ್ರಿಲ್ 24ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ.
ರಾಜ್ಯದಲ್ಲಿ ಒಟ್ಟು 1,110 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೃಹತ್ ಮೆರವಣಿಗೆ ಮೂಲಕ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ನಟ ಸುದೀಪ್ ಜೊತೆಗೂಡಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದರು. ಇತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಿದರು. ಶಿಕಾರಿಪುರದಲ್ಲಿ ಬಿ.ವೈ ವಿಜಯೇಂದ್ರ ತಮ್ಮ ತಂದೆ ಬಿ.ಎಸ್ ಯಡಿಯೂರಪ್ಪ ಜೊತೆಗೂಡಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿಗಳು ನಿನ್ನೆ 164 ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು 147 ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ 108, ಎಎಪಿಯಿಂದ 91 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಬಿಎಸ್ ಪಿ ಅಭ್ಯರ್ಥಿಗಳು 46 ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಿಂದ ಸುಮಾರು 359 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಪುರುಷ ಅಭ್ಯರ್ಥಿಗಳು 1,041, ಮಹಿಳಾ ಅಭ್ಯರ್ಥಿಗಳು 69 ನಾಮಪತ್ರ ಸಲ್ಲಿಸಿದ್ದಾರೆ.










