ಕಲಿಕೆಗೆ ವಯಸ್ಸಿನ ಹಂಗಿಲ್ಲ, ಯಕ್ಷಗಾನವನ್ನು ಯಾವ ವಯಸ್ಸಿನಲ್ಲಾದರೂ ಕಲಿಯಬಹುದು: ಅಶ್ವತ್ಧ್.

88
firstsuddi

ಚಿಕ್ಕಮಗಳೂರು: ಕಲಿಕೆಗೆ ವಯಸ್ಸಿನ ಹಂಗಿಲ್ಲ. ಶ್ರದ್ಧಾವಾನ್ ಲಭತೇ ವಿದ್ಯಾ ಎಂಬ ಮಾತಿನಂತೆ ಯಕ್ಷಗಾನವನ್ನು ಯಾವ ವಯಸ್ಸಿನಲ್ಲಾದರೂ ಕಲಿಯಬಹುದು ಎಂದು ಖ್ಯಾತ ಯಕ್ಷಗಾನ ಕಲಾವಿದ ಅಶ್ವತ್ಧ್ ಹೇಳಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಯಕ್ಷಸಿರಿ ನಾಟ್ಯವೃಂದದಿಂದ ಇತ್ತೀಚೆಗೆ ಆರಂಭಗೊಂಡ ಯಕ್ಷಗಾನ ಕಲಿಕಾ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿ, ದಕ್ಷಿಣಕನ್ನಡದ ಗಂಡು ಕಲೆ ಯಕ್ಷಗಾನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಅದು ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದೆ ಎಂದರು.

ಯಕ್ಷಸಿರಿಯ ನಿರ್ದೇಶಕ ಪರಮೇಶ್ವರ ಮಾತನಾಡಿ ಗುರು ಮುಖೇನ ವಿದ್ಯೆಯನ್ನು ಕಲಿತಾಗ ಅದು ದೋಷವಿಲ್ಲದಂತೆ ನಮ್ಮ ಗ್ರಹಿಕೆಯಾಗುತ್ತದೆ. ಕಲಿಕೆಯು ಆರಂಭ ಶೂರತ್ವವಾಗದೆ, ನಿರಂತರವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಜಿಲ್ಲೆಯ ಆಸಕ್ತರಿಗೂ ಕಲಿಸುವ ನಿಟ್ಟಿನಲ್ಲಿ ಈ ತರಗತಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಯಕ್ಷಸಿರಿಯ ಸಂಯೋಜಕಿ ರೇಖಾ ನಾಗರಾಜರಾವ್, ಕಲಾವಿದರಾದ ಶೋಭಾ ಪರಮೇಶ್ವರ, ಕೆ.ಎಚ್. ಗೀತಾ, ಪೂರ್ಣಿಮಾ, ಅಪೂರ್ವ ವೆಂಕಟೇಶ್, ದಕ್ಷ, ಹಿಮಗಿರಿ ಉಪಸ್ಥಿತರಿದ್ದರು.