ಕಲೆ, ಸಾಹಿತ್ಯ, ಸಂಸ್ಕೃತಿ ಬದುಕನ್ನು ಶ್ರೀಮಂತಗೊಳಿಸುತ್ತವೆ : ಗುಣನಾಥ ಸ್ವಾಮೀಜಿ.

91
firstsuddi

ಚಿಕ್ಕಮಗಳೂರು : ಕಲೆ, ಸಾಹಿತ್ಯ, ಸಂಸ್ಕೃತಿ ನಮ್ಮ ಬದುಕನ್ನು ಶ್ರೀಮಂತಗೊಳಿಸುತ್ತವೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಇಂದು ನಡೆದ ಸಾಹಿತಿ ಬಿ.ಎನ್.ರಮೇಶ್ ಬೊಂಗಾಳೆ ಅವರ 3035 ಮನದ ಮಾತುಗಳುಳ್ಳ ಚಿತ್ತ-ಚಿಂತನ ಕೃತಿಯ ಲೋಕಾರ್ಪಣೆ ಮತ್ತು ಐ.ಎನ್.ನಾಗೇಶ್ ಗೌಡ ಅವರ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಲೆ, ಸಾಹಿತ್ಯ, ಸಂಸ್ಕೃತಿ ವ್ಯಕ್ತಿತ್ವವನ್ನು ರೂಪಿಸುವುದರ ಜೊತೆಗೆ ನಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡುತ್ತವೆ ಎಂದ ಅವರು ನಾವು ಉತ್ತಮರಾಗಬೇಕಾದರೆ ಬೇಡದ. ವ್ಯರ್ಥವಾದ ವಿಚಾರಗಳಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ಸಾಹಿತ್ಯದ ಕೃತಿಗಳನ್ನು ಓದಬೇಕು ಎಂದು ಕಿವಿಮಾತು ಹೇಳಿದರು.

ಯಾವುದೇ ಕೃತಿ, ಕಾವ್ಯಗಳು ಯಾವುದೋ ಜಾತಿಗೆ ಅಥವಾ ವರ್ಗಕ್ಕೆ ಸೀಮಿತವಾಗಿರಬಾರದು, ಅವು ಎಲ್ಲರನ್ನೂ, ಎಲ್ಲವನ್ನೂ ಒಳಗೊಂಡಿರಬೇಕು ಹಾಗಾದಾಗ ಮಾತ್ರ ಅವುಗಳಿಂದ ಸಮಾಜಕ್ಕೆ ಉಪಯೋಗವಾಗುತ್ತದೆ ಎಂದರು.

ಭಿನಂದನಾ ನುಡಿಗಳನ್ನಾಡಿದ ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ 1001 ವಚನಗಳನ್ನು ವಚನ ವರ್ಷ ಎಂಬ ಒಂದೇ ಸಂಪುಟದಲ್ಲಿ ಹೊರತಂದ ಮೊದಲಿಗ ಎಂಬ ಕೀರ್ತಿ ರಮೇಶ್ ಬೊಂಗಾಳೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಪುಸ್ತಕದ ಕುರಿತು ಮಾತನಾಡಿದ ಸಾಹಿತಿ ಡಾ|| ಹೆಚ್.ಎಸ್.ಸತ್ಯನಾರಾಯಣ ಕೃತಿಯಲ್ಲಿರುವ ರಮೇಶ್ ಬೊಂಗಾಳೆ ಅವರ 3035 ಮನದ ಮಾತುಗಳು ಮನನ ಮಾಡಲು ಯೋಗ್ಯವಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಸಾಹಿತಿ ರಮೇಶ್ ಬೊಂಗಾಳೆ ಮತ್ತು ಐ.ಎನ್.ನಾಗೇಶ್ ಗೌಡ ಅವರ ಕುಟುಂಬದ ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.

ತಮ್ಮ ಮನದಾಳದ ಮಾತುಗಳೇ ಕೃತಿಯಲ್ಲಿ ಹೊರಹೊಮ್ಮಿವೆ ಎಂದ ಸಾಹಿತಿ ರಮೇಶ್ ಬೊಂಗಾಳೆ ಪುಸ್ತಕದ ಪ್ರಕಟಣೆ ಮತ್ತು ಲೋಕಾರ್ಪಣೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಚಿತ್ತ-ಚಿಂತನ ಕೃತಿಯ ಲೋಕಾರ್ಪಣೆ ಮಾಡಿದರು. ಸಾಹಿತಿ ರಮೇಶ್ ಬೊಂಗಾಳೆ ಅವರನ್ನು ವಿವಿಧ ಸಂಘ ಸಂಸ್ಥೆಗಳಿಂದ ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಗಾಯಕ ಎಂ.ಎಸ್.ಸುಧೀರ್ ಮತ್ತು ಮಲ್ಲಿಗೆ ಸುಧೀರ್ ತಂಡದಿಂದ ಗೀತಗಾಯನ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆದಿಚುಂಚನಗಿರಿ ವಿ.ವಿ. ಕುಲಪತಿ ಡಾ|| ಸಿ.ಕೆ.ಸುಬ್ರಾಯ, ಬೆಂಗಳೂರು ಭಂಡಾರಿ ಜೈನ್ ಕಾಲೇಜಿನ ಉಪನ್ಯಾಸಕ ಡಾ|| ಮಲಕಪ್ಪ, ಕೆ.ಎಂ.ಭಾಗೀರಥಿ ನಾಗೇಶ್‍ಗೌಡ, ಕೆ.ಎಂ.ಬಸವೇಗೌಡ, ಐ.ಎನ್.ಗೋಪಾಲ್ ಗೌಡ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.