ಕಳಸ : ಮುಂದುವರೆದ ಮಳೆಯ ಆರ್ಭಟ…

704
firstsuddi

ಕಳಸ : ತಾಲ್ಲೂಕಿನಾಧ್ಯಂತ ಕಳೆದ ಒಂದು ದಿನದಿಂದ ಬಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತ, ರಸ್ತೆ ಕುಸಿತ, ಗುಡ್ಡ ಕುಸಿತಗಳು ಸಂಭವಿಸಿದೆ. ನಿನ್ನೆ ಸಂಜೆಯಿಂದ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ರಾತ್ರಿ ಕಳಸ-ಹೊರನಾಡು ಮದ್ಯೆ ಭದ್ರಾ ನದಿಗೆ ಕಟ್ಟಿರುವ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿತ್ತು. ಬೆಳಿಗ್ಗೆ 10 ಗಂಟೆಯವರೆಗೂ ಸೇತುವೆ ಮೇಲೆ ನೀರು ಹರಿದು ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತು. ಸೇತುವೆಯ ಮೇಲೆಯೂ ನೀರು ತುಂಬಿ ಹರಿಯುತ್ತಿದ್ದರೂ ಕೂಡ ಕೆಲ ಬಸ್ಸುಗಳು ಹಾಗೂ ವಾಹನಗಳು ನದಿ ದಾಟಿಸುವ ಸಾಹಸ ಮಾಡಿದರು. ಸ್ಥಳೀಯರು ನೀರಿನೊಂದಿಗೆ ಸೇತುವೆ ಮೇಲೆ ಬಂದು ಬಿದ್ದಿದ್ದ ಬೃಹತ್ ಮರವನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೆಲ ವಾಹನಗಳು ನೀರು ಸಂಪೂರ್ಣವಾಗಿ ಇಳಿಮುಖವಾಗುವ ವರೆಗೆ ಕಾದು ನಂತರ ತಮ್ಮ ಪ್ರಯಾಣ ಬೆಳೆಸಿದರು.

ಕಳಸ-ಕುದುರೆಮುಖ ರಸ್ತೆಯ ಶ್ರೀರಾಮ ಎಸ್ಟೇಟ್ ಸಮೀಪ ಬೃಹತ್ ಗಾತ್ರದ ಮರವೊಂದು ಮುಖ್ಯ ರಸ್ತೆಗೆ ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಕರಾವಳಿ ಬಾಗಕ್ಕೆ ಪ್ರಯಾಣ ಬೆಳೆಸುವವರು ತೊಂದರೆ ಅನುಭವಿಸಿದರು. ಇದೇ ಭಾಗದಲ್ಲಿ ಮುಖ್ಯ ರಸ್ತೆಯ ಅಂಚಿನಲ್ಲಿರುವ ಗುಡ್ಡ ಕುಸಿಯತೊಡಗಿದ್ದು, ಮಳೆ ಮುಂದುವರೆದರೆ ಹೆಚ್ಚಿನ ಅಪಾಯದ ಮುನ್ಸೂಚನೆ ಕಂಡು ಬರುತ್ತಿದೆ. ಹೊರನಾಡು ರಸ್ತೆಯ ಗೂರ್ಲಿಕೆ ಎಂಬಲ್ಲಿ ಮುಖ್ಯ ರಸ್ತೆಯ ತಡೆಗೋಡೆ ಕುಸಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಿಸುವಂತಾಗಿದೆ. ಕಳಸ ಪಶು ಆಸ್ಪತ್ರೆಯ ಕಂಪೌಂಡ್ ಕುಸಿದಿದೆ. ಕೋಟೆಹೊಳೆ ಮಧು ಎಂಬುವವರ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ. ತಾಲ್ಲೂಕಿನ ಭದ್ರಾ ನದಿ ಮತ್ತು ಸೋಮವತಿ ನದಿಗಳು ತುಂಬಿ ಹರಿದು ನದಿ ಪಾತ್ರದ ಹೆಚ್ಚಿನ ಕೃಷಿ ಭೂಮಿಗಳು ಜಲಾವೃತವಾದವು. ಮಂಗಳವಾರದ ಮದ್ಯಾಹ್ನದ ವರೆಗೆ ಬಾರಿ ಮಳೆಯಾಗಿದ್ದು, ಮದ್ಯಾಹ್ನದ ನಂತರ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರುಳಿತು.