ಕಳಸ : ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ…

165
firstsuddi

ಕಳಸ : ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿದಿಯಲ್ಲಿ ಇಂದು ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಅ 17 ರಿಂದ ಅ 29ರವರೆಗೆ ಕ್ಷೇತ್ರದಲ್ಲಿ ಪ್ರತೀ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಇಂದು ಶ್ರೀ ಮಾತೆಗೆ ವಿಶೇಷ ಅಲಂಕಾರಗಳೊಂದಿಗೆ ಜಗಜ್ಜನನೀ ದುರ್ಗಾದೇವಿಯ ಮೊದಲನೆ ಸ್ವರೂಪ ಹಂಸರೂಢ ಸರಸ್ವತಿಯ ರೂಪದಲ್ಲಿ ಮಾತೆ ಅನ್ನಪೂರ್ಣೆಶ್ವರಿ ಕಂಗೊಳಿಸಿದಳು.
ಬೆಳಿಗ್ಗೆ ಘಂಟೆ 6.30ರ ಸಮಯಕ್ಕೆ ಸರಿಯಾಗಿ ನವರಾತ್ರಿಯ ಪೂಜಾ ವಿಧಿ ವಿದಾನಗಳು ಪ್ರಾರಂಭಗೊಂಡವು. ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಪೂಜೆಗಳು ನೆರವೇರಿದವು. ಬೆಳಿಗ್ಗೆ 8.30ಕ್ಕೆ ಶ್ರೀ ಪಂಚದುರ್ಗಾ ಹೋಮ ನಡೆಯಿತು. ಹೋಮದ ಪೂರ್ಣಾಹುತಿಯನ್ನು ದೇವಸ್ಥಾನದ ದರ್ಮಕರ್ತರಾದ ಡಾ| ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು.
ಪರ್ವತರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿದ ಕಾರಣ ಶೈಲಪುತ್ರೀ ಎಂಬ ಹೆಸರಾಯಿತು ಶಿವನ ಅರ್ಧಾಂಗಿಯಾದ ಇವಳು ನವದುರ್ಗೆಯರಲ್ಲಿ ಪ್ರಥಮ ಶೈಲಪುತ್ರಿದುರ್ಗೆಯ ಮಹತ್ವ ಮತ್ತು ಶಕ್ತಿಗಳು ಅನಂತನಾಗಿವೆ. ನವರಾತ್ರಿಯ ಮೊದಲನೆ ದಿನದ ಪೂಜೆಯಲ್ಲಿ ಇವಳ ಪೂಜೆ ಉಪಾಸನೆ ಮಾಡಲಾಗುತ್ತದೆ. ಈ ಮೊದಲನೆ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರ ಯೋಗಸಾದನೆಯು ಪ್ರಾರಂಭವಾಗುತ್ತದೆ. ಈ ಶೈಲಪುತ್ರಿಯನ್ನು ಹೊರನಾಡಿನ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಹಂಸರೂಢಾ ಸರಸ್ವತಿಯಾಗಿ ಪೂಜಿಸುತ್ತಾರೆ.
ಸಂಜೆ 6 ರಿಂದ 7ರ ವರೆಗೆ ಶ್ರೀ ದೇವಿಮಹಾತ್ಮೆ ಪುರಾಣ ಪ್ರವಚನ ನಡೆಯಿತು.
ಅ 18 ರಂದು ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ ನಡೆಯಲಿದೆ.