ಕಳಸ: 12ನೇ ಶತಮಾನಕ್ಕೆ ಸೇರಿದ ಹುಲಿ ಬೇಟೆಯ ಸ್ಮಾರಕ ಶಿಲ್ಪ ಪತ್ತೆ…

276
firstsuddi

ಕಳಸ : ಹೋಬಳಿಯ ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸ್ರಿಕಲ್ಲು ಪ್ರದೇಶದಲ್ಲಿ 12ನೇ ಶತಮಾನಕ್ಕೆ ಸೇರಿದ ಹುಲಿ ಬೇಟೆಯ ಸ್ಮಾರಕ ಶಿಲ್ಪವನ್ನು ಡಾ.ಸುಪ್ರೀತ ಕೆ.ಎನ್ ಕಳಸ ಅವರು ಕ್ಷೇತ್ರಕಾರ್ಯ ಶೋಧನೆಯಲ್ಲಿ ಪತ್ತೆ ಮಾಡಿದ್ದಾರೆ.
ಈ ಸ್ಮಾರಕ ಶಿಲ್ಪವು 6 ಫೂಟ್ ಉದ್ದ ಮತ್ತು 3 ಫೂಟ್ ಅಗಲವಿದ್ದು, ಐದು ಹಂತಗಳನ್ನು ಒಳಗೊಂಡಿದೆ. ಮೊದಲನೆಯ ಹಂತದದಲ್ಲಿ ಗೋವುಗಳನ್ನು ವ್ಯಾಘ್ರ ದಿಂದ ಕಾಪಾಡುವ ಇಬ್ಬರು ವೀರರ ಕೆತ್ತನೆಯಿದೆ. ಈ ವೀರರು ಬಿಲ್ಲು-ಬಾಣವನ್ನು ಹಿಡಿದುಕೊಂಡಿದ್ದು ಇವರ ಜೊತೆಗೆ ಶ್ವಾನವನ್ನು ಕೂಡ ತೋರಿಸಲಾಗಿದೆ. ಎರಡನೆಯ ಹಂತದಲ್ಲಿ ವೀರರನ್ನು ಪಲ್ಲಕ್ಕಿಯಲ್ಲಿ ರಣರಂಗಕ್ಕೆ ಕರೆದೊಯ್ಯುವ ಚಿತ್ರಣವಿದ್ದು, ವೀರನ ಜೊತೆ ಅಶ್ವದಳವನ್ನು ತೋರಿಸಲಾಗಿದೆ. ಮೂರನೆಯ ಹಂತದಲ್ಲಿ ವೀರನು ಬಿಲ್ಲು-ಬಾಣವನ್ನು ಹಿಡಿದುಕೊಂಡು ಎದುರಾಳಿಗಳೊಂದಿಗೆ ಹೋರಾಡುವ ಚಿತ್ರಣವಿದೆ. ನಾಲ್ಕನೆಯ ಹಂತದಲ್ಲಿ ಯದ್ಧದಲ್ಲಿ ಮಡಿದ ವೀರನು ಕೈ ಮುಗಿದು ಕುಳಿತಿದ್ದು ಈತನ ಬಲ ಭಾಗದಲ್ಲಿ ಚಾಮರಧಾರಿಯರ ಹಾಗು ಎಡ ಭಾಗದಲ್ಲಿ ಯತಿಯರ ಶಿಲ್ಪವನ್ನು ಕೆತ್ತನೆ ಮಾಡಲಾಗಿದೆ. ಕೊನೆಯ ಹಂತದದಲ್ಲಿ ಸೂರ್ಯ-ಚಂದ್ರ,ಶಿವಲಿಂಗವನ್ನು ಪೂಜಿಸುತ್ತಿರುವ ಯತಿ, ನಂದಿ ಮತ್ತು ಹಸು-ಕರುವಿನ ಚಿತ್ರಣವಿದೆ. ಅಧ್ಯಯನ ದೃಷ್ಠಿಯಿಂದ ಈ ಸ್ಮಾರಕ ಶಿಲ್ಪವು ವಿಶಿಷ್ಠವಾಗಿದೆ. ಏಕೆಂದರೆ ವೀರನು ಯುದ್ದದಲ್ಲಿ ಮಡಿದ ನಂತರ ಆತನ ನೆನಪಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡಿದರೂ ಸಹ ವೀರನು ತನ್ನ ಜೀವಿತಾವಧಿಯಲ್ಲಿ ಹುಲಿಗಳೊಂದಿಗೆ ಸೆಣೆಸಾಡಿ ಗೋವುಗಳನ್ನು ರಕ್ಷಿಸಿದ್ದ ಹಾಗಾಗಿ ಈತನ ದೈರ್ಯ ಮತ್ತು ಪರಾಕ್ರಮವನ್ನು ಒಂದೇ ಸ್ಮಾರಕ ಶಿಲ್ಪದಲ್ಲಿ ತೋರಿಸಿರುವುದು ವಿಶೇಷ ಎಂದು ಸುಪ್ರೀತ ಹೇಳುತ್ತಾರೆ.