ಕಳೆನಾಶಕ ಸಿಂಪಡಿಸಲು ಹೋಗಿ ಅಸ್ವಸ್ಥಗೊಂಡಿದ್ದ ಅರಣ್ಯಾಧಿಕಾರಿ ಸಾವು…

55
firstsuddi

ಹುಬ್ಬಳ್ಳಿ: ಕಳೆನಾಶಕ ಸಿಂಪಡಿಸಲು ಹೋಗಿ ಅಸ್ವಸ್ಥಗೊಂಡಿದ್ದ ಅರಣ್ಯಾಧಿಕಾರಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕುಮಟಾ ತಾಲೂಕಿನ ಬಾಡ ಗ್ರಾಮದ ನಿವಾಸಿ ಯೋಗೇಶ್ ನಾಯಕ್ ಮೃತ ದುರ್ದೈವಿ. ಯೋಗೇಶ್ ನಾಯಕ್ ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವಾರದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಯೋಗೇಶ್, ಹೆಂಡತಿ ಮತ್ತು ಮಗುವನ್ನು ಅಗಲಿದ್ದಾರೆ.

ಯೋಗೇಶ್ ನಾಯಕ್ ಅವರು ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜೂನ್ 27 ರಂದು ಸಾಗವಾನಿ ಸಸಿಗಳ ಕಳೆಯನ್ನು ನಾಶಪಡಿಸಲು ಹಾಗೂ ಭೂಮಿ ಒಳಗಡೆ ಇರುವ ಹುಳಹುಪ್ಪಡಿಗಳನ್ನು ಸಾಯಿಸಲು ಯೋಗೇಶ್ ನಾಯಕ್ ಪ್ಯಾರಾಗ್ಯೂಟ್ ಎಂಬ ವಿಷಪೂರಿತ ಕೀಟ ನಾಶಕವನ್ನು ಸಿಂಪಡಿಸಿದ್ದರು. ಬಳಿಕ ಕೈ ತೊಳೆಯದೆ ಊಟ, ನೀರು ಸೇವಿಸಿದ್ದಾರೆ.

ನಂತರ ಮನೆಗೆ ಬಂದು ಒಂದು ದಿನದ ನಂತರ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ಖಾಸಗಿ ವೈದ್ಯರನ್ನು ಸಂಪರ್ಕಿಸಿದಾಗ ಆಂಟಿಬಯಾಟಿಕ್ ಕೊಟ್ಟಿದ್ದಾರೆ. ಇದರಿಂದ ಉರಿ ಕಡಿಮೆಯಾಗದ ಕಾರಣ ಮರುದಿನ ಯೋಗೇಶ್ ನಾಯಕ್ ತನ್ನ ಕಾರಲ್ಲೇ ಹುಬ್ಬಳ್ಳಿಯ ಎಸ್​ಡಿಎಂಗೆ ದಾಖಲಾಗಿದ್ದರು.

ಅಲ್ಲಿಯೂ ಚಿಕಿತ್ಸೆ ಸಿಗಲು ಒಂದು ದಿನ ವಿಳಂಬವಾಗಿದ್ದು, ಚಿಕಿತ್ಸೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್​​ಗಳು ಡ್ಯಾಮೇಜ್ ಆಗಿದ್ದವು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಗೆ ಯೋಗೇಶ್ ನಾಯಕ್ ಕೋಮಾ ಸ್ಥಿತಿಗೆ ತಲುಪಿದ್ದರು. ಅಲ್ಲೂ ಕೂಡ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.