ಗದಗ: ಕಾಂಗ್ರೆಸ್ ಮುಖಂಡನ ಹೆಸರನ್ನು ಡೆತ್ ನೋಟ್‌ನಲ್ಲಿ ಬರೆದಿಟ್ಟು ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಡೆದಿದೆ.
ಡಾ. ಶಶಿಧರ ಹಟ್ಟಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಲುಂಗಿಯಿಂದ ನೇಣಿಗೆ ಶರಣಾಗಿದ್ದಾರೆ. ರಾಜು ಶಿರಗುಂಪಿ, ಅಶೋಕ ವಾಸವಿ ಶೆಟ್ಟರ್, ಗಜೇಂದ್ರಗಡ ತಾಲೂಕಿನ ಸರ್ಜಾಪೂರ ಗ್ರಾಮದ ಶರಣಗೌಡ ಎಲ್ ಪಾಟೀಲ ಹಾಗೂ ಇನ್ನೂ ಕೆಲವರ ಜೊತೆ ವೈದ್ಯ ಶಶಿಧರ ಮರಳು ವ್ಯವಹಾರ ಮಾಡುತ್ತಿದ್ದರು. ಆರೋಪಿ ಶರಣಗೌಡ ಪಾಟೀಲ, ವೈದ್ಯ ಶಶಿಧರಗೆ ನಿತ್ಯವೂ ಮರಳಿನ ವ್ಯವಹಾರದ ಲೆಕ್ಕ ಪತ್ರ, ಹಣ ಕೊಡುವಂತೆ ಒತ್ತಡ ಹಾಕುತ್ತಿದ್ದರು. ನಿತ್ಯ ಹಣ ಕೊಡಲೇಬೇಕು ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಡೆತ್ ನೋಟ್‌ನಲ್ಲಿ ಏನಿದೆ?
ಡೈರಿಯ ಮೊದಲ ಪುಟದಲ್ಲಿ ದನದಾಹಿ ಶರಣಗೌಡನಿಗೆ ಧಿಕ್ಕಾರ, ದನ ಪಿಶಾಚಿ ಶರಣಗೌಡನಿಗೆ ಬೋಮ್ಮಸಾಗರ ದುರ್ಗಮ್ಮನ ಶಾಪ ತಟ್ಟಲಿ. ಮೇಲೆ ಬಸಪ್ಪ ಒಳಗೆ ವಿಷಪ್ಪನಾದ ಶರಣಗೌಡನೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ರೋಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಶಶಿಧರ ಪತ್ನಿ ದೂರು ನೀಡಿದ್ದು, ರೋಣ ಪೊಲೀಸ್ ಠಾಣೆಯಲ್ಲಿ ಶರಣಗೌಡ ಪಾಟೀಲ ವಿರುದ್ಧ ಪ್ರಕರಣ ದಾಖಲಾಗಿದೆ.










