ಹಾಸನ: ಕಾಡಾನೆಗಳ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಳಗಳಲೆ ಹಾಗೂ ಹೆಬ್ಬನಹಳ್ಳಿ ಗ್ರಾಮಗಳಲ್ಲಿ ನಡೆದಿದೆ.
ಗುಳಗಳಲೆ ಗ್ರಾಮದ ಕುರ್ಚಿ ಕಾಫಿ ಎಸ್ಟೆಟ್ ರೈಟರ್ ಇನಾಯತ್ (45) ಮೇಲೆ ಕಾಡಾನೆ ದಾಳಿ ಮಾಡಿದೆ. ಸದ್ಯ ಕೂದಲೆಳೆ ಅಂತರದಲ್ಲಿ ಇನಾಯತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನಾಯತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಹೆಬ್ಬನಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಹಬೀದ್ (26) ಮೇಲೆ ಒಂಟಿಸಲಗ ಏಕಾಏಕಿ ದಾಳಿ ನಡೆಸಿದ್ದು, ಗಂಭೀರ ಸ್ವರೂಪದ ಗಾಯವಾಗಿದೆ. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀಟಮ್ಮ ಎಂಬ ಹೆಸರಿನ ಗುಂಪಿನಲ್ಲಿದ್ದ ಒಂಟಿಸಲಗ ಬೇರ್ಪಟ್ಟು ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಜನರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಕಾಡಾನೆ ಹಾವಳಿಗೆ ಪರಿಹಾರ ಕಂಡುಹಿಡಿಯುವಂತೆ ಮಲೆನಾಡು ಭಾಗದ ಜನರು ಸರ್ಕಾರ ಹಾಗೂ ಇಲಾಖೆಯನ್ನು ಆಗ್ರಹಿಸಿದ್ದಾರೆ.










