ಕಾಡಾನೆ ದಾಳಿ : ಸಮಸ್ಯೆ ಬಗೆಹರಿಸಿಕೊಡುವಂತೆ ಒತ್ತಾಯ…

295
firstsuddi

ಮೂಡಿಗೆರೆ (ಜಯಮಿತ್ರ) : ತಾಲ್ಲೂಕಿನ ಅರಣ್ಯ ಪ್ರದೇಶ ಪ್ರದೇಶ ಸಮೀಪವಿರುವ ಗ್ರಾಮಗಳಿಗೆ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಅಪಾರವಾದ ಫಸಲು ನಾಶದ ಜೊತೆಗೆ ಗ್ರಾಮಸ್ಥರ ಮೇಲಿನ ದಾಳಿ ಹೆಚ್ಚಾಗಿದೆ. ಇದರಿಂದ ರೈತರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆಗೆ ಒಳಗಾಗಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವಂತೆ ಊರುಬಗೆ, ತ್ರಿಪುರ ಗ್ರಾಮ ಪಂಚಾಯತಿ ಗ್ರಾಮಸ್ಥರು ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಇಂದು ಮೂಡಿಗೆರೆ ವಲಯ ಅರಣ್ಯ ಇಲಾಖೆಗೆ ಮನವಿ ಪತ್ರ ನೀಡಿದ ಗ್ರಾಮಸ್ಥರು, ಇದುವರೆಗೂ ಬೆಳೆನಾಶ ಮಾಡುತ್ತಿದ್ದ ಕಾಡಾನೆಗಳು ಇದೀಗ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಿವೆ. ಹಿಂದಿನ ವರ್ಷ ಸುನೀಲ್ ಎಂಬ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿ ಸಾಯಿಸಿತ್ತು. ಪ್ರಕರಣದ ನೆನಪು ಇನ್ನೂ ಹಸಿರಾಗಿರುವಾಗಲೇ ಕೆಲವು ದಿನಗಳಿಂದ ಹಲವು ಗ್ರಾಮಗಳ ರಸ್ತೆಗಳಲ್ಲಿ ಆನೆಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು ಎದುರಿಗೆ ಸಿಕ್ಕ ಮನುಷ್ಯರು ಹಾಗೂ ವಾಹನಗಳ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ. ಇದರಿಂದಾಗಿ ಗ್ರಾಮಗಳ ಜನರು ತಮ್ಮ ಜಮೀನುಗಳಿಗೆ ತೆರಳಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುವಂತಾಗಿದೆ. ಬುಧವಾರದಂದು ಕುಂಬರಡಿ ಗ್ರಾಮದ ಅವಿನಾಶ್ ಎಂಬುವವರ ಮೇಲೆ ಆನೆ ದಾಳಿ ನಡೆಸಿದ್ದು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಅವರು ಚಲಾಯಿಸುತ್ತಿದ್ದ ಬೈಕ್‍ನ್ನು ಆನೆ ಜಖಂ ಮಾಡಿದೆ. ಈ ಕೂಡಲೇ ಆನೆ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ನೀಡುವ ಜೊತೆಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕಾಡಿನಿಂದ ಬಂದಿರುವ ನಾಲ್ಕು ಆನೆಗಳು ಎರಡು ಗುಂಪುಗಳಾಗಿ ಅಡ್ಡಾಡುತ್ತಿದ್ದು, ತಾಲ್ಲೂಕಿನ ಕುಂಬರಡಿ, ಗೌಡಹಳ್ಳಿ, ಭೈರಾಪುರ, ಹೊಸಕೆರೆ, ಸತ್ತಿಗನಹಳ್ಳಿ, ಹೇರಿಕೆ, ಇಂಗಡಿ, ಬೈದುವಳ್ಳಿ, ಮೂಡರಹಳ್ಳಿ, ಗುತ್ತಿ, ಹೆಸಗೋಡು, ಮೇಕನಗದ್ದೆ ಗ್ರಾಮಗಳ ಸುತ್ತಮುತ್ತಲು ಸುಳಿದಾಡುತ್ತಿವೆ ಎನ್ನುವುದು ಗ್ರಾಮಸ್ಥರುಗಳ ಆರೋಪವಾಗಿದೆ. ಪ್ರತೀವರ್ಷ ಆನೆಗಳು ದಾಳಿ ಮಾಡಿದಾಗ ಆನೆಗಳನ್ನು ಕಾಡಿಗೆ ಓಡಿಸುವ ಪ್ರಹಸನ ನಡೆಯುತ್ತಿದೆ. ಆದರೆ ಶಾಶ್ಪತ ಪರಿಹಾರ ಮಾತ್ರ ಕಂಡುಕೊಳ್ಳುತ್ತಿಲ್ಲ. ನಮ್ಮ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಚಕಾರ ಎತ್ತದೆ ಸುಮ್ಮನೆ ಕುಳಿತಿರುವುದು ಅಸಹನೀಯವಾಗಿದೆ. ಕೂಡಲೇ ಪರಿಹಾರ ಕೈಗೊಳ್ಳದಿದ್ದಲ್ಲಿ ಉಪವಾಸ ಧರಣಿ ಕೈಗೊಳ್ಳುವ ಮೂಲಕ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮನವಿ ಪತ್ರ ನೀಡುವಾಗ ಮರಗುಂದ ಪ್ರಸನ್ನ, ಭಾರತಿ, ಆದರ್ಶ, ಕೆ.ಆರ್.ಗಣೇಶ್, ನವೀನ್, ಸಂಭ್ರಮ್, ಕುಂಬರಡಿ ಸಂತೋಷ್, ಕುಂಬರಡಿ ರತನ್ ಸೇರಿದಂತೆ ವಿವಿಧ ಗ್ರಾಮಗಳ ಹಲವು ಗ್ರಾಮಸ್ಥರು ಹಾಜರಿದ್ದರು.