ಕಾಫಿಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಸ್ಥಳದಲ್ಲಿ ಮತ್ತೊಬ್ಬ ಉದ್ಯಮಿ ನದಿಗೆ ಹಾರಿ ಸಾವಿಗೆ ಶರಣು…

48
firstsuddi

ಉಳ್ಳಾಲ: ಕಳೆದ ಮೂರು ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆ ಇದೀಗ ಮತ್ತೆ ಯುವಕನೋರ್ವನ ಆತ್ಮಹತ್ಯೆಯಿಂದ ಸುದ್ಧಿಯಾಗಿದೆ.

2019 ರಲ್ಲಿ ಕಾಫಿಡೇ ಮಾಲೀಕ ಸಿದ್ದಾಥ್೯ ಆತ್ಮಹತ್ಯೆ ನಂತರ ಸರಣಿ ಆತ್ಮಹತ್ಯೆಗಳೇ ನೇತ್ರಾವತಿ ಸೇತುವೆಯಲ್ಲಿ ನಡೆದಿತ್ತು. 2020 ರಲ್ಲಿ ಆತ್ಮಹತ್ಯೆ ತಡೆಗಾಗಿ ಮುಡಾ ಅಭಿವೃದ್ಧಿ ಅನುದಾನದ ಮೂಲಕ ತಡೆಬೇಲಿ ಅಳವಡಿಸಲಾಯಿತು. ತದನಂತರ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳು ನಿಂತಿತ್ತು.

ಇದೀಗ ಮತ್ತೆ ಕಾಫಿಡೇ ಮಾಲೀಕ ಸಿದ್ದಾಥ್೯ ತವರೂರು ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ್ ಫಾಮ್೯ ನಿವಾಸಿ ಬಿ.ಎಸ್ ಶಂಕರಗೌಡ ಎಂಬವರ ಪುತ್ರ ಪ್ರಸನ್ನ (37) ಎಂಬವರ ಆತ್ಮಹತ್ಯೆಯಿಂದ ಮತ್ತೆ ಆತಂಕ ಮೂಡಿಸಿದೆ.

ಮಧ್ಯಾಹ್ನ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದು ರಾಷ್ಟ್ರೀಯ ಹೆದ್ದಾರಿ.66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ನೀರುಪಾಲಾಗಿದ್ದರು.

ಘಟನಾ ಸ್ಥಳದಲ್ಲಿ ಅನೇಕ ಜನರು ಸೇರಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.