ಕಾಲ್ತುಳಿತ ಪ್ರಕರಣ: ಇಂದು ತಿರುಪತಿಗೆ ಸಿಎಂ ಚಂದ್ರಬಾಬು ನಾಯ್ಡು ಭೇಟಿ.

30

ವಿಜಯವಾಡ: ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ನಡೆದ ಕಾಲ್ತುಳಿತದಲ್ಲಿ ಆರು ಜನ ಭಕ್ತರು ಸಾವನ್ನಪ್ಪಿದ ದುರಂತ ಘಟನೆಗೆ ಸಂಬಂಧಿಸಿದಂತೆ ಸಿಎಂ ಎನ್ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ್ದಾರೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರ ದರ್ಶನಕ್ಕೆ ಟೋಕನ್ ವಿಚಾರದಲ್ಲಿ ತಿರುಪತಿಯಲ್ಲಿರುವ ವಿಷ್ಣು ನಿವಾಸದ ಬಳಿ ಕಾಲ್ತುಳಿತ ಸಂಭವಿಸಿ ಹಲವಾರು ಭಕ್ತರು ಸಾವನ್ನಪ್ಪಿರುವುದು ಆಘಾತಕ್ಕೀಡು ಮಾಡಿದೆ. ಭಕ್ತರು ಟೋಕನ್ ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಸಮಯದಲ್ಲಿ ನಡೆದ ಈ ದಾರುಣ ಘಟನೆ ನನ್ನನ್ನು ತುಂಬಾ ನೋಯಿಸಿತು. ಕೆಲವು ಜನರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಉನ್ನತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಆದೇಶಿಸಿದ್ದೇನೆ. ಪರಿಸ್ಥಿತಿ ಕುರಿತು ನಿರಂತರವಾಗಿ ಜಿಲ್ಲಾ ಮತ್ತು ಟಿಟಿಡಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು. ಇಂದು ಸಿಎಂ ಚಂದ್ರಬಾಬು ನಾಯ್ಡು ತಿರುಪತಿಗೆ ಭೇಟಿ ನೀಡಲಿದ್ದಾರೆ. ಘಟನೆಯಲ್ಲಿ ಇನ್ನೂ 4 ಮಂದಿ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 40 ಜನರು ಗಾಯಗೊಂಡಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ ಹತ್ತು ದಿನಗಳ ಕಾಲ ವೈಕುಂಠ ದ್ವಾರ ಸರ್ವ ದರ್ಶನಕ್ಕಾಗಿ ಟೋಕನ್ ವಿತರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ.