ಕಾಶ್ಮೀರದಲ್ಲಿ ಕೊರೆಯುವ ಚಳಿಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ಐವರು ದುರ್ಮರಣ.

23

ಶ್ರೀನಗರ: ಮನೆಯಲ್ಲಿಯೇ ಉಸಿರುಗಟ್ಟಿ ಒಂದೇ ಕುಟುಂಬದ ಐದು ಜನರು ಸಾವನ್ನಪ್ಪಿರುವ ದುರಂತ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. ಮೃತರಲ್ಲಿ ಪೋಷಕರು ಮತ್ತು ಅವರ ಇಬ್ಬರು ಅಪ್ರಾಪ್ತ ಮಕ್ಕಳು ಮತ್ತು 28 ದಿನಗಳ ಹಿಂದೆ ಜನಿಸಿದ ಶಿಶು ಕೂಡ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಉರಿಯವರಾದ ಅಜಾಜ್ ಅಹ್ಮದ್ ಭಟ್ ಹಾಗೂ ಕುಟುಂಬಸ್ಥರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಇವರು ಕಳೆದ 2 ತಿಂಗಳಿನಿಂದ ಇಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸವಿದ್ದರು. ಭಟ್ ಅವರು ಲಲಿತ್ ಗ್ರ್ಯಾಂಡ್ ಪ್ಯಾಲೇಸ್‍ನ ಖಾಸಗಿ ಹೋಟೆಲ್‍ನಲ್ಲಿ ಬಾಣಸಿಗರಾಗಿದ್ದರು. ತನ್ನ ಮಗನನ್ನು ಸಂಪರ್ಕಿಸಲು ಸಾಧ್ಯವಾಗದ ಭಟ್ ಅವರ ತಾಯಿಯು ಮನೆ ಮಾಲೀಕ ಮುಖ್ತಾರ್ ಅಹ್ಮದ್ ಅವರನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅಜಾಜ್ ಅಹ್ಮದ್ ಭಟ್ ತಾಯಿಯು ನನಗೆ ಫೋನ್ ಮಾಡಿ, ಸಂಜೆ 4 ಗಂಟೆಯಿಂದ ಅಜಾಜ್ ತನ್ನ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದರು. ಆಗ ನಾನು ಪರಿಶೀಲಿಸಲು ಇನ್ನೊಬ್ಬ ಬಾಡಿಗೆದಾರನನ್ನು ಕಳುಹಿಸಿದೆ ಎಂದು ಮುಖ್ತಾರ್ ತಿಳಿಸಿದರು. ಬಾಡಿಗೆದಾರನು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ, ನಾವು ಬಾಗಿಲು ಒಡೆದು ತೆರೆದಾಗ ಅಜಾಜ್, ಅವರ ಪತ್ನಿ ಮತ್ತು ಅವರ ಮೂರು ಜನ ಮಕ್ಕಳು ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ಮುಖ್ತಾರ್ ಹೇಳಿದರು.