ಕುಂಭಮೇಳದಲ್ಲಿ ಮಿಯಾವಾಕಿ ತಂತ್ರ ಬಳಸಿ ಲಕ್ಷಾಂತರ ಭಕ್ತರಿಗೆ ಶುದ್ಧ ಗಾಳಿ.

21

ಉತ್ತರ ಪ್ರದೇಶ: 2025ರ ಮಹಾ ಕುಂಭ ಮೇಳಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಶುದ್ಧ ಗಾಳಿ ಮತ್ತು ಆರೋಗ್ಯಕರ ವಾತಾವರಣವನ್ನು ಒದಗಿಸಲು ಪ್ರಯಾಗ್‍ರಾಜ್‍ನ ವಿವಿಧ ಸ್ಥಳಗಳಲ್ಲಿ ದಟ್ಟ ಕಾಡುಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ಸಂಸ್ಕøತಿ ಸಚಿವಾಲಯ ತಿಳಿಸಿದೆ. ಪ್ರಯಾಗ್‍ರಾಜ್ ಮುನ್ಸಿಪಲ್ ಕಾರ್ಪೊರೇಷನ್ ಕಳೆದ 2 ವರ್ಷಗಳಲ್ಲಿ ಹಲವಾರು ಆಕ್ಸಿಜನ್ ಬ್ಯಾಂಕ್‍ಗಳನ್ನು ಸ್ಥಾಪಿಸಲು ಜಪಾನಿನ ಮಿಯಾವಾಕಿ ತಂತ್ರ ಬಳಸಿದೆ. ಈಗ ಅವು ಹಚ್ಚ ಹಸಿರಿನ ಕಾಡುಗಳಾಗಿ ಮಾರ್ಪಟ್ಟಿವೆ. ಈ ಪ್ರಯತ್ನಗಳು ಹಸಿರನ್ನು ಹೆಚ್ಚಿಸುವುದಲ್ಲದೆ, ಗಾಳಿಯ ಗುಣಮಟ್ಟವನ್ನೂ ಸುಧಾರಿಸಲು ಕೊಡುಗೆ ನೀಡಿವೆ. ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಸರ್ಕಾರ ತಿಳಿಸಿದೆ. ಪ್ರಯಾಗ್‍ರಾಜ್ ಮಹಾನಗರ ಪಾಲಿಕೆ ಆಯುಕ್ತ ಚಂದ್ರ ಮೋಹನ್ ಗರ್ಗ್ ಮಾತನಾಡಿ, ಮಿಯಾವಾಕಿ ತಂತ್ರವನ್ನು ಬಳಸಿಕೊಂಡು ನಗರದ ಹಲವಾರು ಭಾಗಗಳಲ್ಲಿ ದಟ್ಟ ಕಾಡುಗಳನ್ನು ನಿರ್ಮಿಸಲಾಗಿದೆ. ನೈನಿ ಕೈಗಾರಿಕಾ ಪ್ರದೇಶದಲ್ಲಿ 63 ಜಾತಿಗಳ ಸುಮಾರು 1.2 ಲಕ್ಷ ಮರಗಳನ್ನು ನೆಡುವ ಅತಿದೊಡ್ಡ ಅಭಿಯಾನ ನಡೆಸಲಾಗಿದೆ. ನಗರದ ಅತಿದೊಡ್ಡ ಕಸ ಸುರಿಯುವ ಅಂಗಳವನ್ನು ಸ್ವಚ್ಛಗೊಳಿಸಿದ ಬಳಿಕ ಬಸ್ವಾರ್‍ನಲ್ಲಿ 27 ವಿವಿಧ ಜಾತಿಗಳ 27 ಸಾವಿರ ಮರಗಳನ್ನು ನೆಡಲಾಗಿದೆ ಎಂದು ತಿಳಿಸಿದರು. ಈ ಯೋಜನೆ ಕೈಗಾರಿಕಾ ತ್ಯಾಜ್ಯವನ್ನು ತೊಡೆದುಹಾಕಲು ಸಹಾಯ ಮಾಡುವುದಲ್ಲದೆ ಧೂಳು, ಕೊಳಕು ಮತ್ತು ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ. ಇದಕ್ಕೂ ಹೆಚ್ಚುವರಿಯಾಗಿ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತಿದೆ. ಮಿಯಾವಾಕಿ ಕಾಡುಗಳು ವಾಯು ಮತ್ತು ಜಲ ಮಾಲಿನ್ಯವನ್ನು ಕಡಿಮೆ ಮಾಡುವುದು, ಮಣ್ಣಿನ ಸವೆತ ತಡೆಗಟ್ಟುವುದು ಮತ್ತು ಜೀವವೈವಿಧ್ಯತೆಯನ್ನು ಹೆಚ್ಚಿಸುವಂತಹ ಹಲವು ಪ್ರಯೋಜನಗಳನ್ನು ಹೊಂದಿವೆ.