ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ಉಗ್ರ ಶಾರಿಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ – ಮಾ. 15ರವರೆಗೆ ಎನ್ಐಎ ಕಸ್ಟಡಿಗೆ…

63
firstsuddi

ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ನನ್ನು ಮಾರ್ಚ್ 15ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕಸ್ಟಡಿಗೆ ನೀಡಲಾಗಿದೆ.

ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕಿತ ಉಗ್ರ ಶಾರಿಕ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಎರಡೂವರೆ ತಿಂಗಳ ಬಳಿಕ ಆತ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಇಂದು ಡಿಸ್ಚಾರ್ಜ್ ಮಾಡಲಾಗಿದೆ. ಬಳಿಕ ಆತನನ್ನು ಬೆಂಗಳೂರಿನ ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮಾರ್ಚ್ 15ರವರೆಗೆ ಎನ್ಐಎ ಅಧಿಕಾರಿಗಳ ಕಸ್ಟಡಿಗೆ ನೀಡಿ ಆದೇಶಿಸಿದೆ.

ಇನ್ನು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಾಗೂ ತಮಿಳುನಾಡಿನ ಕೊಯಮತ್ತೂರು ಸ್ಫೋಟದ ಹೊಣೆಯನ್ನು ಕೊನೆಗೂ ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತಿದೆ.

ಐಸಿಸ್ ಸಂಘಟನೆಯ ವಕ್ತಾರ ಐಎಸ್ ಕೆಪಿ (ಇಸ್ಲಾಮಿಕ್ ಸ್ಟೇಟ್ಸ್ ಕೊರಸನ್ ಪ್ರಾವಿನ್ಸ್) ನಡೆಸುವ ವಾಯ್ಸ್ ಆಫ್ ಕೂರಸ ನಿಯತಕಾಲಿಕೆಯಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಫೋಟದ ಹೊಣೆ ಹೊತ್ತಿರುವ ಕುರಿತಾಗಿ ಪ್ರಕಟಿಸಲಾಗಿದೆ.

2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿದ್ದು, ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.