ಬೆಂಗಳೂರು: ಕುಡಿದ ಆಮಲಿನಲ್ಲಿ ಮಹಿಳೆಯನ್ನು ಎಳೆದೊಯ್ದು ಆತ್ಯಾಚಾರವೆಸಗಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಅಮೃತಹಳ್ಳಿ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೃತ್ಯವೆಸಗಿದ ಆರೋಪದಡಿ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಮೃತಹಳ್ಳಿಯ ವರದರಾಜು ಲೇಔಟ್ ನಲ್ಲಿ ವಾಸವಾಗಿದ್ದ 55 ವರ್ಷದ ಮಹಿಳೆ ‘ಹತ್ಯಾ’ಚಾರಕ್ಕೆ ಒಳಗಾಗಿದ್ದಾಳೆ. ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಉತ್ತರ ಪ್ರದೇಶದ ಗೋರಕ್ ಪುರ ಮೂಲದ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕುಟುಂಬವೊಂದು ಕೆಲಸ ಅರಸಿಕೊಂಡು ಮೂರ್ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿತ್ತು. ಅಮೃತಹಳ್ಳಿಯ ವರದರಾಜು ಲೇಔಟ್ ಶೆಡ್ ನಲ್ಲಿ ವಾಸವಾಗಿತ್ತು. ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಏಪ್ರಿಲ್ 2ರ ರಾತ್ರಿ ಮನೆಯ ಸಮೀಪದಲ್ಲಿದ್ದ ಬಾರ್ ಗೆ ಹೋಗಿ ಮದ್ಯ ಸೇವಿಸಿ ಹಿಂತಿರುಗುವಾಗ ಅದೇ ಬಾರ್ ನಲ್ಲೇ ಪಾನಮತ್ತನಾಗಿದ್ದ ಯುವಕ ಮಹಿಳೆಯನ್ನು ಗಮನಿಸಿ ಹಿಂಬಾಲಿಸಿಕೊಂಡು ಬಂದಿದ್ದನು. ಮಾರ್ಗ ಮಧ್ಯೆ ಆಕೆಯನ್ನು ಬೆದರಿಸಿ ಎಳೆದೊಯ್ದು ನಿರ್ಮಾಣ ಹಂತದ ಕಟ್ಟಡದಲ್ಲಿ ಆತ್ಯಾಚಾರವೆಸಗಿ ಬಳಿಕ ಹತ್ಯೆ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದನು.
ಮಾರನೇ ದಿನ ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದ ಬಳಿ ಕಾರ್ಮಿಕರು ಮಹಿಳೆಯ ಶವಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮತ್ತೊಂದೆಡೆ ಮನೆಯಿಂದ ಹೊರಹೋಗಿದ್ದ ಮಹಿಳೆ ರಾತ್ರಿಯಿಡಿ ಬರದಿರುವುದನ್ನ ಕಂಡು ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಕಟ್ಟಡದ ಬಳಿ ಶವ ಪತ್ತೆ ಮಾಹಿತಿ ಹಿನ್ನೆಲೆ ಕುಟುಂಬಸ್ಥರು ಭೇಟಿ ನೀಡಿದಾಗ ಮಹಿಳೆ ಶವ ನಗ್ನವಾದ ಸ್ಥಿತಿಯಲ್ಲಿತ್ತು. ಮುಖ, ಮರ್ಮಾಂಗ ಹಾಗೂ ತಲೆ ಮೇಲೆ ರಕ್ತದ ಕಲೆ ಇರುವುದನ್ನು ಗುರುತಿಸಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಯುವಕನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.