ಕುಡಿಯುವ ನೀರು, ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಬೇಕು: ಸಿಎಂ ಒತ್ತಾಯ.

26

ಬೆಂಗಳೂರು: ಶನಿವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್ 2025ರಲ್ಲಿ ಕರ್ನಾಟಕದಲ್ಲಿನ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳಿಗೆ ಅಗತ್ಯ ಅನುಮೋದನೆ ನೀಡಬೇಕು. ನಗರಗಳ ನಿರಂತರ ಬೆಳವಣಿಗೆಯನ್ನು ಬೆಂಬಲಿಸಲು ನಿರ್ಣಾಯಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೊಸ ಯೋಜನೆಯನ್ನು ರೂಪಿಸುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ರಾಯಚೂರು, ದಾವಣಗೆರೆ, ಬಳ್ಳಾರಿ ಮತ್ತು ಕಲಬುರಗಿಯಂತಹ ನಗರಗಳು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ನೀಡುವ ನಗರವಾಗಿ ಮುಂದುವರೆದಿದ್ದು, ತ್ವರಿತ ನಗರೀಕರಣ ಮತ್ತು ದೇಶದ ಇತರ ಭಾಗಗಳಿಂದ ವಲಸಿಗರ ಹೆಚ್ಚಳದಿಂದ ಅವು ಒತ್ತಡವನ್ನು ಎದುರಿಸುತ್ತಿವೆ. ಈ ಪ್ರದೇಶಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ವಸತಿ, ಸುಸ್ಥಿರ ಸಾರಿಗೆ ವ್ಯವಸ್ಥೆಗಳು, ನೀರು ಸರಬರಾಜು, ಆಧುನಿಕ ನೈರ್ಮಲ್ಯ ಸೌಲಭ್ಯಗಳು, ಗುಣಮಟ್ಟದ ಆರೋಗ್ಯ ಸೇವೆಗಳಂತಹ ಯೋಜನೆಗಳಿಗೆ ಅನುದಾನ ಒದಗಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ಹೊಸ ಯೋಜನೆಗಳತ್ತ ಗಮನ ಹರಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಮಲೆನಾಡು ಭಾಗದ ಸಮಗ್ರ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ಹತ್ತು ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡಬೇಕು. ಇದು ಸೇವಾ ವಿತರಣೆಗೆ ಸಂಬಂಧಿಸಿದ ಹೆಚ್ಚಿನ ವೆಚ್ಚವನ್ನು ಪರಿಹರಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ನೆರವಾಗುತ್ತದೆ ಮತ್ತು ಪ್ರದೇಶದ ಪರಿಸರ ಪ್ರಾಮುಖ್ಯತೆಯನ್ನು ಕಾಪಾಡುತ್ತದೆ ಎಂದು ಹೇಳಿದ್ದಾರೆ. ಕೇಂದ್ರ ಪ್ರಾಯೋಜಿತ ವಿವಿಧ ಯೋಜನೆಗಳಡಿಯಲ್ಲಿ ಕಾರ್ಮಿಕರಿಗೆ ನೀಡಲಾಗುವ ಗೌರವಧನ ಅಥವಾ ಪ್ರೋತ್ಸಾಹಗಳನ್ನು ಹೆಚ್ಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.