ಆಸ್ಟ್ರೇಲಿಯಾ ಮಾಡೆಲ್, 2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಸಿಯನ್ನಾ ವಿಯರ್ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 23 ವರ್ಷ ವಯಸ್ಸಾಗಿತ್ತು.
ವರದಿಗಳ ಪ್ರಕಾರ, ಸಿಯನ್ನಾ ವಿಯರ್ ಅವರು ಏಪ್ರಿಲ್ 2ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಗ್ರೌಂಡ್ನಲ್ಲಿ ಹಾರ್ಸ್ರೈಡ್ ಮಾಡುತ್ತಿದ್ದರು. ಈ ವೇಳೆ ಕುದುರೆ ಕುಸಿದು ಬಿದ್ದಿದ್ದು, ಸಿಯನ್ನಾ ವಿಯರ್ ತಲೆ ಭಾಗಕ್ಕೆ ಗಾಯ ಉಂಟಾಗಿತ್ತು. ಅವರನ್ನು ತಕ್ಷಣವೇ ವೆಸ್ಟಮೀಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರಿಗೆ ವಾರಗಳವರೆಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಸಿಡ್ನಿ ಯೂನಿವರ್ಸಿಟಿಯಿಂದ ಅವರು ಇಂಗ್ಲಿಷ್ ಹಾಗೂ ಮನಶಾಸ್ತ್ರದಲ್ಲಿ ಡಬಲ್ ಡಿಗ್ರಿ ಪಡೆದಿದ್ದಾರೆ. ಅವರು ಇಂಗ್ಲೆಂಡ್ಗೆ ತೆರಳಿ ತಮ್ಮ ಕರಿಯರ್ ಮುಂದುವರಿಸುವ ಆಲೋಚನೆಯಲ್ಲಿದ್ದರು.
ಸಿಯನ್ನಾ ವಿಯರ್ ಅವರಿಗೆ ಹಾರ್ಸ್ ರೈಡಿಂಗ್ ಬಗ್ಗೆ ವಿಶೇಷ ಪ್ರೀತಿ ಇತ್ತು. ಸಮಯ ಸಿಕ್ಕಾಗಲೆಲ್ಲ ಅವರು ಕುದುರೆ ಸವಾರಿ ಮಾಡುತ್ತಿದ್ದರು. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ‘ನಾನು ನಗರದಲ್ಲಿ ವಾಸಿಸುತ್ತಿದ್ದೇ. ಆದರೆ ನನಗೆ ಕುದುರೆ ಓಡಿಸುವ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಈ ಪ್ಯಾಷನ್ ಎಲ್ಲಿಂದ ಬಂತು ಗೊತ್ತಿಲ್ಲ. ನಾನು 3ನೇ ವಯಸ್ಸಿನಿಂದಲೂ ಕುದುರೆ ಸವಾರಿ ಮಾಡುತ್ತಿದ್ದೇನೆ. ಅದು ಇಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಪ್ರತಿ ವಾರಾಂತ್ಯದಲ್ಲಿ ಹಾರ್ಸ್ ರೈಡಿಂಗ್ ತರಬೇತಿ ನೀಡುತ್ತೇನೆ ಮತ್ತು ಕುದುರೆ ಸವಾರಿ ಮಾಡುತ್ತೇನೆ’ ಎಂದು ಅವರು ಹೇಳಿದ್ದರು.
ಇದೀಗ ಸೌಂದರ್ಯ ಕ್ಷೇತ್ರದಲ್ಲಿ ಸಾಧನೆಗೈದ ಸಿಯೆನ್ನಾ ವೀರ್ ನಿಧನಕ್ಕೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.










