ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣು ಚೀತಾ ಸಾವು…

61
firstsuddi

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರವಾಗಿ ಚೀತಾಗಳು ಸಾವನ್ನಪ್ಪುತ್ತಿವೆ. ಆಫ್ರಿಕಾದಿಂದ ತಂದ ಕೆಲವು ಹೆಣ್ಣು ಚಿರತೆಗಳಲ್ಲಿ ಧಾತ್ರಿ ಕೂಡ ಒಂದು. ಅದು ಕೂಡ ಶವವಾಗಿ ಪತ್ತೆಯಾಗಿದೆ.

ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಒಟ್ಟಾರೆ ಕುನೋ ಪಾರ್ಕ್‌ನಲ್ಲಿಯೇ ಚೀತಾ ಸಾವು ಕಂಡ 9ನೇ ಪ್ರಕರಣವಾಗಿದೆ.

ಏಳು ಗಂಡು, ಆರು ಹೆಣ್ಣು ಮತ್ತು ಒಂದು ಹೆಣ್ಣು ಮರಿ ಸೇರಿ ಒಟ್ಟು 14 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದ ಬೊಮಾಸ್‌ನಲ್ಲಿ ಇರಿಸಲಾಗಿದ್ದು, ಅವುಗಳ ಆರೋಗ್ಯದ ಬಗ್ಗೆ ಉದ್ಯಾನದ ವನ್ಯಜೀವಿ ಪಶುವೈದ್ಯರು ಹಾಗೂ ನಮೀಬಿಯಾದ ತಜ್ಞರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿದ ಒಂಭತ್ತು ಚೀತಾಗಳಲ್ಲಿ ಮೂರು ಮರಿಗಳು ಸೇರಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ 20 ಚೀತಾಗಳನ್ನು ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಅಂದಿನಿಂದ ಅಲ್ಲಿ ನಾಲ್ಕು ಮರಿಗಳು ಜನಿಸಿದ್ದವು

ಕಳೆದ ತಿಂಗಳು ನಾಲ್ಕು ದಿನಗಳ ಅಂತರದಲ್ಲಿ ಎರಡು ಗಂಡು ಚೀತಾಗಳು ಸಾವನ್ನಪ್ಪಿದ್ದು, ತೇಜಸ್ ಹೆಸರಿನ ಚೀತಾ ಜುಲೈ 11 ರಂದು ಸಾವನ್ನಪ್ಪಿತ್ತು. ಜುಲೈ 14 ರಂದು ಸೂರಜ್ ಹೆಸರಿನ ಚೀತಾದ ಶವ ಪತ್ತೆಯಾಗಿತ್ತು. ಇದಕ್ಕೂ ಮೊದಲು ಮಾರ್ಚ್ 27 ರಂದು ಸಶಾ ಎಂಬ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಮೃತಪಟ್ಟಿತ್ತು. ಉದಯ್ ಹೆಸರಿನ ಚೀತಾ ಏಪ್ರಿಲ್ 23 ರಂದು ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತ್ತು. ದಕ್ಷಾ ಹೆಸರಿನ ಹೆಣ್ಣು ಚೀತಾ ಮೇ 9 ರಂದು ಸಾವಿಗೀಡಾಗಿತ್ತು. ಹವಾಮಾನ ವೈಪರೀತ್ಯ ಮತ್ತು ನಿರ್ಜಲೀಕರಣದಿಂದ ಮೇ 25 ರಂದು ಎರಡು ಚಿರತೆ ಮರಿಗಳು ಹಾಗೂ ಮೇ 23 ರಂದು ಮತ್ತೊಂದು ಮರಿ ಸಾವನ್ನಪ್ಪಿದ್ದವು.