ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಕೃತಿಗಳ ಅಧ್ಯಯನ ಮಾಡಿದರೆ ನಾವು ವೈಚಾರಿಕತೆಯ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಬಿ.ವಿರೂಪಾಕ್ಷ ಹೇಳಿದರು.
ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಮತ್ತು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ಗಾನ ಗಾರುಡಿಗ ಡಾ.ಸಿ.ಅಶ್ವತ್ ಅವರ ಜನ್ಮದಿನದ ಅಂಗವಾಗಿ ನಿನ್ನೆ ಏರ್ಪಡಿಸಿದ್ದ ನುಡಿ ನಮನ ಮತ್ತು ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರು ಜಗದ ಕವಿ, ಯುಗದ ಕವಿ, ರಸಋಷಿಯಾಗಿದ್ದ ಅವರು ಸಾಹಿತ್ಯದ ಕೃತಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಮೌಢ್ಯವನ್ನು ತೊಳೆದು ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವ ಕೆಲಸ ಮಾಡಿದವರು ಎಂದರು.
ಪ್ರಕೃತಿಯನ್ನು ವರ್ಣಿಸಿದ ಕವಿ ಕುವೆಂಪು ಅವರನ್ನು ಬಿಟ್ಟರೆ ಮತ್ತೊಬ್ಬರಿಲ್ಲ, ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಕುವೆಂಪು ಅವರು ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಕೃಷಿ ಮಾಡಿದ್ದಾರೆ ಎಂದು ಹೇಳಿದರು.
ಸಂಗೀತ ಶಿಕ್ಷಕಿ ಸುಮಾಪ್ರಸಾದ್ ರಾಷ್ಟ್ರಕವಿ ಕುವೆಂಪು ಮತ್ತು ಗಾನ ಗಾರುಡಿಗ ಡಾ.ಸಿ.ಅಶ್ವತ್ ಅವರ ಬದುಕು ಬರಹಗಳ ಕುರಿತು ಮಾತನಾಡಿದರು.
ಜನ್ಮದಿನದ ಅಂಗವಾಗಿ ಗಾಯಕ ಮಲ್ಲಿಗೆ ಸುಧೀರ್ ವಿದ್ಯಾರ್ಥಿಗಳಿಗೆ ಗಾಯನ ತರಬೇತಿ ನೀಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಮಲ್ಲಿಗೆ ಸುಧೀರ್ ಮತ್ತು ಅಭಿಷೇಕ್ ಮಲ್ಲಿಗೆ ಅವರಿಂದ ರಾಷ್ಟ್ರಕವಿ ಕುವೆಂಪು ಮತ್ತು ಡಾ.ಸಿ.ಅಶ್ವತ್ ಅವರ ಗೀತೆಗಳ ಗಾಯನ ನಡೆಯಿತು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರೇಮ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಮಂಜುಳಾ, ಮಹೇಶ್, ಶಿಕ್ಷಕರಾದ ಮಂಜುನಾಥ್, ವಿಜಯಕುಮಾರ್, ಸುಧಾ, ಪಲ್ಲವಿ ಚವ್ಹಾಣ್, ಕವನ ಚವ್ಹಾಣ್ ಉಪಸ್ಥಿತರಿದ್ದರು.










