ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆ…

131
firstsuddi

ವಿಜಯಪುರ : ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನಲ್ಲಿ ನಡೆದಿದೆ. ಪರಶುರಾಮ ಲಮಾಣಿ(35) ಹಾಗೂ ರಮೇಶ ಲಮಾಣಿ(38) ನಾಪತ್ತೆಯಾಗಿದ್ದಾರೆ. ನಿನ್ನೆ ಸಂಜೆ ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ಮೀನು ಹಿಡಿಯಲು ಮೂವರು ತೆರಳಿದ್ದರು. ಈ ವೇಳೆ ಗಾಳಿ ಸಹಿತ ಭಾರಿ ಮಳೆಯಾದ ಪರಿಣಾಮ ತೆಪ್ಪ ಮಗಚಿ ಬಿದ್ದಿದೆ. ಮೂವರ ಪೈಕಿ ಅಕ್ಷಯ ಲಮಾಣಿ ಎಂಬುವವರು ಈಜಿ ದಡ ಸೇರಿದ್ದು, ಪರಶುರಾಮ ಲಮಾಣಿ ಹಾಗೂ ರಮೇಶ್ ಲಮಾಣಿ ಎಂಬುವವರು ನಾಪತ್ತೆಯಾಗಿದ್ದು, ಇಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೊಲ್ಹಾರ ತಹಶೀಲ್ದಾರ್ ಎಂ.ಎಸ್. ಭಾಗವಾನ್ ಹಾಗೂ ಪೊಲೀಸರು ಪರಿಶೀಲನೆ ನಡೆಸಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಇಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.