ಬೆಂಗಳೂರು: ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ಮೊದಲ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಾಗಿದೆ. ಪರ್ಪಲ್ ಲೈನ್‌ನ ಪ್ರಮುಖ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ನಿನ್ನೆ ಸಂಜೆ 6 ಗಂಟೆಗೆ ಪ್ರಾರಂಭವಾಯಿತು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.
1 ನೇ ರೈಲು ಸಂಚಾರ ಪರೀಕ್ಷೆಯು ಸಂಜೆ 6.04 ಕ್ಕೆ ಕೆಆರ್ ಪುರದಿಂದ ಬೈಯಪ್ಪನಹಳ್ಳಿ ನಡುವೆ ನಿಧಾನಗತಿಯಲ್ಲಿ ನಡೆಯಿತು. ರೈಲು ಮರಳಿ ಕೆಆರ್ ಪುರ ನಿಲ್ದಾಣಕ್ಕೆ ಹಿಂತಿರುಗಿತು ಎಂದು ಬಿಎಂಆರ್‌ಸಿಎಲ್ ಟ್ವೀಟ್ ಮಾಡಿದೆ.
2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವು ವಾರಗಳ ಮೊದಲು, ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು 13.71 ಕಿಮೀ ವೈಟ್‌ಫೀಲ್ಡ್ (ಕಾಡುಗೋಡಿ) – ಕೃಷ್ಣರಾಜಪುರ (ಕೆಆರ್ ಪುರ) ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದರು. ಬೈಯಪ್ಪನಹಳ್ಳಿ- ಕೆಆರ್ ಪುರ ನಡುವಣ ಸಂಪರ್ಕ ಇಲ್ಲದ ಕಾರಣ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿತ್ತು.
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿ– ಕೆಆರ್ ಪುರ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ. ಸಂಚಾರ ಆರಂಭಗೊಂಡರೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಬಹುದು ಎಂದು ಬಿಎಂಆರ್‌ಸಿಎಲ್ ನಿರೀಕ್ಷಿಸುತ್ತಿದೆ.










