ನವದೆಹಲಿ: ಕೆಲಸ ಕೊಡಿಸುವ ನೆಪದಲ್ಲಿ ಪರಿಚಯಸ್ಥ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದೆಹಲಿ ಸಾರಿಗೆ ನಿಗಮದ ಬಸ್ ಕಂಡಕ್ಟರ್ ಅನ್ನು ದೆಹಲಿ ಪೊಲೀಸರು ಬಂಧಿಸಿರುವ ಘಟನೆ ಉತ್ತರ ದೆಹಲಿಯ ತಿಮಾರ್‌ಪುರ ಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆ ಡಿಟಿಸಿಯಲ್ಲಿ 2010 ರಿಂದ 2017 ರವರೆಗೆ ಟೈಪಿಸ್ಟ್ ಆಗಿ ಕೆಲಸ ಮಾಡಿದ್ದರು. ಆದರೆ ಆಕೆಗೆ ಮಗುವಾದ ನಂತರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಳು. ಎರಡು ವರ್ಷಗಳ ಹಿಂದೆ ಆರೋಪಿಯನ್ನು ಭೇಟಿಯಾಗಿ ಮತ್ತೆ ಕೆಲಸ ಕೊಡಿಸಲು ಮನವಿ ಮಾಡಿದ್ದಳು.
ಮನೆಗೆ ಬಂದ ಆಕೆಗೆ ಜ್ಯೂಸ್‌ನಲ್ಲಿ ಪ್ರಜ್ಞೆ ತಪ್ಪುವ ಪುಡಿಯನ್ನು ಹಾಕಿ, ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದರ ಜತೆಗೆ ಅಶ್ಲೀಲ ಫೋಟೋಗಳನ್ನು ತೆಗೆದು ವೀಡಿಯೋ ಕೂಡ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಫೋಟೋ, ವೀಡಿಯೋವನ್ನು ಇಟ್ಟುಕೊಂಡು, ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಈ ಘಟನೆಯ ಬಗ್ಗೆ ಮಹಿಳೆ ಆರೋಪಿಯ ಸ್ನೇಹಿತರೊಬ್ಬರಿಗೆ ತಿಳಿಸಿದಾಗ, ಅವನು ಫೋಟೋಗಳನ್ನು ಡಿಲಿಟ್ ಮಾಡುವ ನೆಪದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಿರಂತರ ಶೋಷಣೆ ಹಿನ್ನೆಲೆ ಮಹಿಳೆ ದೂರು ನೀಡಿದ್ದಾಳೆ.
ಈ ಪ್ರಕರಣದಲ್ಲಿ ನಾಲ್ಕೈದು ಮಂದಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.










