ಬೆಂಗಳೂರು: ಇಂಧನ ಖಾತೆಯ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟ ಹಿನ್ನೆಲೆ ತೆಲಂಗಾಣದ ಮಾಜಿ ಕಾರ್ಪೊರೇಟರ್ ಪುತ್ರನನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಕರೀಂನಗರ ನಿವಾಸಿ ರವಿಕಾಂತ ಶರ್ಮಾ (33) ಬಂಧಿತ ಆರೋಪಿ. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಆರೋಪಿ ರವಿಕಾಂತ ಶರ್ಮಾ, ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿಬಿಟ್ಟಿದ್ದರು.
ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹಜ್ಯೋತಿ ಯೋಜನೆ ಬಗ್ಗೆ ಭಾರತ ರಾಷ್ಟ್ರ ಸಮಿತಿಯ ಐಟಿ ಸೆಲ್ ಸದಸ್ಯ ರವಿಕಾಂತ ಶರ್ಮಾ ಪೋಸ್ಟ್ ಮಾಡಿದ್ದ. ಗೃಹ ಜ್ಯೋತಿ ಯೋಜನೆಯ ಬಗ್ಗೆ ನಕಲಿ ಆಡಿಯೋ ಕ್ಲಿಪ್ ಶೇರ್ ಮಾಡಿದ್ದಕ್ಕೆ ಬೆಸ್ಕಾಂ ಜನರಲ್ ಮ್ಯಾನೇಜರ್ ಅವರು ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.










