ಮೂಡಿಗೆರೆ: ಕೇಂದ್ರದ ಬಿಜೆಪಿ ಸರಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ : ಮೋಟಮ್ಮ.

390
firstsuddi

ಮೂಡಿಗೆರೆ: ಚೀನಾದೊಂದಿಗೆ ಕಾಳಗದಲ್ಲಿ ಹುತಾತ್ಮರಾದ 20 ಮಂದಿ ಭಾರತೀಯ ಯೋಧರ ಬಗ್ಗೆ ದೇಶದ ಜನತೆ ಮರುಕಪಡುತ್ತಿದ್ದರೆ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ಗಂಭೀರ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಬೆಜೆಪಿಯವರು ಕಾಂಗ್ರೆಸ್ ಆಡಳಿತ ಕಾಲದಲ್ಲಿ ಮಾಡಿಟ್ಟಿದ್ದ ದೆಹಲಿಯ ಕೆಂಪುಕೋಟೆ, ಬಿಎಸ್‍ಎನ್‍ಎಲ್, ಭಾರತ್ ಪೆಟ್ರೋಲಿಯಂ, ರೈಲ್ವೆ, ವಿಮಾನ ಸೇರಿದಂತೆ ಸರಕಾರದ ಜೀವನಾಡಿಯನ್ನೇ ಖಾಸಗಿಯವರಿಗೆ ವಹಿಸಿದ್ದಾರೆ. ವ್ಯಾಪಾರಿ ಮನೋಭಾವದ ಬಿಜೆಪಿ ಸರಕಾರದಿಂದ ಜನರಿಗೆ ಅಭದ್ರತೆ ಕಾಡುತ್ತಿದೆ. ಸುಲಿಗೆ ಮಾಡಿ ದಿಕ್ಕು ತಪ್ಪಿಸಿ ಚಪ್ಪಾಳೆ, ದೀಪ, ಗಂಟೆ ಬಾರಿಸಿ ಕೀಳುಮಟ್ಟದ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಕಳೆದ ಬಾರಿ ಅತಿವೃಷ್ಟಿಗೆ ಸಿಲುಕಿ ನೂರಾರು ಮನೆಗಳು ಕುಸಿದಿತ್ತು. ರಸ್ತೆ, ಸೇತುವೆ, ತಡೆಗೋಡೆ,ಮೋರಿ ರೈತರ ಜಮೀನು ಹಾನಿಗೊಂಡು ಜೆಲ್ಲೆಯಲ್ಲಿ ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿ ಜನ ಬೀದಿಗೆ ಬಂದಿದ್ದಾರೆ. ಒಂದು ವರ್ಷ ಕಳೆದರೂ ಸರಕಾರ ನಿರಾಶ್ರಿತರಿಗೆ ವಾಸಿಸಲು ಮನೆ ನಿರ್ಮಿಸಿಕೊಟ್ಟಿಲ್ಲ. ಸೇತುವೆ, ರಸ್ತೆ, ಮೋರಿ, ತಡೆಗೋಡೆ, ಹಾನಿಗೊಂಡ ರೈತರ ಜಮೀನು ಯಾವುದರ ಬಗ್ಗೆಯೂ ಸರಕಾರ ತಲೆ ಕೆಡಿಸಿಕೊಂಡಿಲ್ಲ. ಬಿಜೆಪಿ ಪಕ್ಷ ಅಧಿಕಾರ ನಡೆಸುತ್ತಿರುವುದು ರಾಷ್ಟ್ರೀಯ ವಿಪತ್ತಿಗಿಂತ ದೊಡ್ಡದುರಂತವಾಗಿದೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಅವರು ಮಾತನಾಡಿ, 7 ತರಗತಿಯಿಂದ ವಿದ್ಯಾರ್ಥಿಗಳಿಗೆ ಸರಕಾರ ಆನ್‍ಲೈನ್ ಪಾಠ ಆರಂಭಿಸುವುದಾಗಿ ಹೇಳಿದೆ. ಗ್ರಾಮೀಣ ಭಾಗದಲ್ಲಿ ಮಳೆ ಪ್ರಾರಂಭವಾದಾಗಿನಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಮೊಬೈಲ್ ನೆಟ್‍ವರ್ಕ್ ಸಂಪರ್ಕ ಸಿಗುತ್ತಿಲ್ಲ. ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ತಿಳಿಸಿದರೆ ಜಿಯೋ ಮೊಬೈಲ್ ಬಳಸುವಂತೆ ಪುಕ್ಕಟೆ ಸಲಹೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಸರಕಾರವು ಅನಿಲ್ ಅಂಬಾನಿ ಒಡೆತನದ ಜಿಯೋ ಕಂಪನಿಯ ಬ್ರಾಂಡ್ ಅಂಬಾಸಿಡರ್‍ನಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ, ಹೇಮಶೇಖರ್, ಎಂ.ಎಸ್.ಅನಂತ್, ಎಚ್.ಪಿ.ರಮೇಶ್, ಎಚ್.ಆರ್.ಸಂಪತ್, ಅಭಿಗೌಡ ಇದ್ದರು.