ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಶೇ.50ಕ್ಕೆ ನಿಗದಿಪಡಿಸಬೇಕು: ಕೆ.ಟಿ.ರಾಧಾಕೃಷ್ಣ.

81
firstsuddi

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಶೇ.50 ಕ್ಕೆ ನಿಗದಿಪಡಿಸಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಒತ್ತಾಯಿಸಿದರು.

ನಗರದ ರಾಮನಹಳ್ಳಿಯಲ್ಲಿ ಇಂದು ಗೌರಿ ಸೇವಾ ಟ್ರಸ್ಟನ್ನು ಉದ್ಘಾಟಿಸಿ ಟ್ರಸ್ಟ್ ನಿಂದ ನೀಡಲಾದ ಪಠ್ಯ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಮಹಿಳಾ ಮೀಸಲಾತಿಯನ್ನು ಹೆಚ್ಚಿಸಲು ಈ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮುಂದಾಗಿದ್ದರು. ಆ ವೇಳೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಹಾಗಾಗೀ ಅದು ನೆನೆಗುದಿಗೆ ಬಿದ್ದಿತ್ತು ಎಂದರು.

ಇತ್ತೀಚೆಗೆ ಮಹಿಳಾ ಮೀಸಲಾತಿಯನ್ನು ಶೇ.33ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿದೆ ಎಂದ ಅವರು, ಮಹಿಳೆಯರು ಪುರುಷರಿಗೆ ಸರಿಸಮಾನವಾಗಿರುವುದರಿಂದ ಅದನ್ನು ಶೇ.50ಕ್ಕೆ ನಿಗದಿಪಡಿಸಬೇಕು ಎಂದು ಸಲಹೆ ಮಾಡಿದರು.

ಮಹಿಳಾ ಮೀಸಲಾತಿಯನ್ನು ಶೇ.50ಕ್ಕೆ ನಿಗದಿಪಡಿಸುವಂತೆ ಮಹಿಳೆಯರೂ ಹೋರಾಟ ನಡೆಸಬೇಕು ಎಂದರು. ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಅವಕಾಶ ಮತ್ತು ಸವಲತ್ತುಗಳನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕಿವಿಮಾತು ಹೇಳಿದರು.

ಗಿರಿಗಂಗೋತ್ರಿ ಶಾಲೆಯ ಮುಖ್ಯ ಶಿಕ್ಷಕ ಎಲ್.ಜಿ.ಪರಮೇಶ್ವರಪ್ಪ ಮಾತನಾಡಿ, ಸಹಸ್ರಾರು ಮಕ್ಕಳಿಗೆ ವಿದ್ಯಾದಾನ ಮಾಡಿರುವ ಗಿರಿಗಂಗೋತ್ರಿ ಶಾಲೆ ದುಸ್ತಿತಿ ಯಲ್ಲಿದ್ದು ಅದಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ನೂತನ ಕಟ್ಟಡವನ್ನು ನಿರ್ಮಿಸಬೇಕು ಎಂದು ವೇದಿಕೆಯಲ್ಲಿದ್ದ ನಗರಸಭಾ ಸದಸ್ಯರಿಗೆ ಮನವಿ ಮಾಡಿದರು.

ಗಿರಿಗಂಗೋತ್ರಿ ಶಾಲೆಯ ವಿದ್ಯಾರ್ಥಿಗಳಿಗೆ ಗೌರಿ ಸೇವಾ ಟ್ರಸ್ಟ್ ವತಿಯಿಂದ ಪಠ್ಯ ಪರಿಕರಗಳನ್ನು ವಿತರಿಸಲಾಯಿತು. ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ನೀಡಲಾಯಿತು.

ನಗರಸಭಾ ಸದಸ್ಯ ಲಕ್ಷ್ಮಣ್‍ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದೀಯ ಅಂಜುಮನ್‍ ಕಮಿಟಿ ಅಧ್ಯಕ್ಷ ಸೈಯದ್‍ ಗೌಸ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮುಳ್ಳಯ್ಯ, ಪ್ರದೀಪ್, ಗೌರಿಟ್ರಸ್ಟಿನ ಮುಖ್ಯಸ್ಥರಾದ ರವಿಕುಮಾರ್, ಲತಾ ರವಿಕುಮಾರ್, ಸೌಜನ್ಯ ಉಪಸ್ಥಿತರಿದ್ದರು.