ಕೊಟ್ಟಿಗೆಹಾರ:ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಅಭ್ಯರ್ಥಿಯಾಗಿದ್ದು ಕನ್ನಡ ನಾಡು ನುಡಿಯ ಸೇವೆಗೆ ಸದಾ ಸಿದ್ದನಾಗಿರುತ್ತೇನೆ ಎಂದು ಹಿರಿಯ ಲೇಖಕ ಸುಂದರ್ ಬಂಗೇರಾ ಹೇಳಿದರು.
ಕೊಟ್ಟಿಗೆಹಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಧ್ಯಂತ ಪ್ರವಾಸ ಮಾಡಿ ಕಸಾಪ ಸದಸ್ಯರ ಮನೆಗಳಿಗೆ ಬೇಟಿ ನೀಡಿ ಅವರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಈ ಬಾರಿ ಕಸಾಪ ಚುನಾವಣೆಯಲ್ಲಿ ಸ್ಪರ್ದಿಸುತ್ತೇನೆ. 70 ರ ದಶಕದಿಂದ ಸಾಹಿತ್ಯ ಕೃಷಿ ಮಾಡಿಕೊಂಡು ಬಂದಿದ್ದೇನೆ. 2008 ಮತ್ತು 2016 ರಲ್ಲಿಯೂ ಕೂಡ ಕಸಾಪ ಚುನಾವಣೆಯಲ್ಲಿ ಸ್ಪರ್ದಿಸಿದ್ದೆ. ಆ ಸಂದರ್ಭದಲ್ಲಿ ಜಿಲ್ಲಾಧ್ಯಂತ ಪ್ರವಾಸ ಮಾಡಿದ್ದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಹಳ ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ ಎಂದರು.
ಕಸಾಪದಲ್ಲಿ ನಿಜವಾದ ಯೋಗ್ಯತೆ ಇರುವವರಿಎಗೆ ಸ್ಥಾನಮಾನ ಸಿಗುತ್ತಿಲ್ಲ. ಇತ್ತೀಚೀನ ದಿನಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೊಡುವುದನ್ನು ನಿಲ್ಲಿಸಲಾಗಿದೆ. ನಿಜವಾದ ಯೋಗ್ಯತೆ ಇರುವ ಸಾಧಕರಿಗೆ ಪ್ರಶಸ್ತಿ ಸಿಗುವಂತಾಗಬೇಕಿದೆ. ಜಿಲ್ಲೆಯಲ್ಲಿ ಹಲವಾರು ಮಂದಿ ಎಲೆಮರೆಯ ಪ್ರತಿಭೆಗಳಿದ್ದು ಅಂತಹ ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಬೇಕಿದೆ. ಕಸಾಪದ ಏಳಿಗೆಗೆ ಶಿಕ್ಷಕರ ಕೊಡುಗೆ ಅಪಾರವಾಗಿದ್ದು ಅವರಿಗೆ ಸೂಕ್ತ ಸ್ಥಾನಮಾನಗಳು ಸಿಗಬೇಕಾಗಿದೆ. ಶಿಕ್ಷಕರಿಗೆ ಕಸಾಪದಲ್ಲಿ ಪ್ರಾತಿನಿಧ್ಯ ನೀಡಬೇಕಿದೆ ಎಂದರು.
ಬಣಕಲ್ ಸಹಕಾರ ಸಂಘದ ನಿರ್ದೇಶಕ ಟಿ.ಎಂ ಗಜೇಂದ್ರ ಮಾತನಾಡಿ ಸುಂದರ್ ಬಂಗೇರಾ ಅವರು ಹಲವಾರು ಕೃತಿಗಳನ್ನು ರಚಿಸಿದ್ದು ಸಾಹಿತ್ಯ ಕ್ಷೇತ್ರಕ್ಕೆ ತಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರು ಜಿಲ್ಲಾ ಕಸಾಪ ಅಧ್ಯಕ್ಷರಾದರೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದರು.
ಗೆಳೆಯರ ಬಳಗದ ಸದಸ್ಯ ಸಂಜಯಗೌಡ ಮಾತನಾಡಿ ನಿಷ್ಟುರವಾಗಿ ಬರೆಯುವ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಸುಂದರ ಬಂಗೇರಾ ಅವರು ಈ ಬಾರಿಯ ಕಸಾಪ ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವುದು ಶ್ಲಾಘನೀಯ. ಕಸಾಪದಲ್ಲಿ ಗಣನೀಯವಾದ ಬದಲಾವಣೆಯನ್ನು ತರಬೇಕಾಗಿದೆ. ನಿರಂತರ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ.ಪಂ ಸದಸ್ಯರಾದ ರಮೇಶ್, ಟೈಲರ್ ಸಂಘದ ಮುಖಂಡ ಷಣ್ಮುಗಾನಂಧ,ಬಿಳುಗುಳ ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಶಾಂತಿ, ಸ್ಥಳೀಯರಾದ ಅಶ್ವತ್ ಅತ್ತಿಗೆರೆ, ಸುನೀಲ್, ಶರತ್ ಮುಂತಾದವರು ಇದ್ದರು.










