ಕೊಡಗಿನಲ್ಲಿ ಜಲಪ್ರಳಯದಿಂದ ತತ್ತರಿಸಿರುವ ಸಂತ್ರಸ್ತರಿಗೆ ಜಿಲ್ಲಾ ಯುವ ಕಾಂಗ್ರೇಸ್ ಬಳಗದಿಂದ ನೆರವಿನ ಹಸ್ತ…

1104
firstsuddi

ಚಿಕ್ಕಮಗಳೂರು – ಕೊಡಗಿನಲ್ಲಿ ಜಲಪ್ರಳಯದಿಂದ ತತ್ತರಿಸಿರುವ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನಗರದಿಂದ ಕಳುಹಿಸುವ ಮೂಲಕ ಜಿಲ್ಲಾ ಯುವ ಕಾಂಗ್ರೇಸ್ ಸ್ನೇಹಿತರ ಬಳಗ ನಿರಾಶ್ರಿತರಿಗೆ ನೆರವಿನ ಹಸ್ತ ಚಾಚಿದೆ.ನಿರಾಶ್ರಿತರಿಗೆ ನೆರವು ನೀಡಲು ಸಂಕಲ್ಪಿಸಿದ ಯುವ ಕಾಂಗ್ರೇಸ್ ಸ್ನೇಹಿತರ ಬಳಗ ಶನಿವಾರ ಬೆಳಿಗ್ಗೆ ತಮ್ಮಲ್ಲಿದ್ದ ಹಣವನ್ನು ಒಗ್ಗೂಡಿಸಿ ನಲವತ್ತು ಸಾವಿರ ರೂ ಹಣದಲ್ಲಿ ಸಂತ್ರಸ್ತರಿಗೆ ಅತ್ಯಗತ್ಯವಾದ ಔಷಧಿ, ಬಿಸ್ಕತ್, ರಗ್ಗು, ಅಕ್ಕಿ, ಸೀರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಿದರು.
ನಂತರ ಸಂಜೆ ವೇಳೆಗೆ ಮಿನಿ ಟ್ರಕ್‍ನಲ್ಲಿ ಆ ವಸ್ತುಗಳನ್ನು ಮಡಕೇರಿಯ ಯುವ ಕಾಂಗ್ರೇಸ್ ಬಳಗಕ್ಕೆ ಕಳುಹಿಸಿ ಅವುಗಳನ್ನು ಸಂತ್ರಸ್ತರಿಗೆ ತಲುಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಕೆ.ವಿ.ಶಿವಕುಮಾರ್ ತಕ್ಷಣಕ್ಕೆ ನಮ್ಮ ನಮ್ಮಲ್ಲೇ ಹಣವನ್ನು ಒಗ್ಗೂಡಿಸಿ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ಕಳುಹಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಸ್ತುಗಳನ್ನು ಕಳುಹಿಸಲಾಗುವುದು ಎಂದರು.
ಅತಿವೃಷ್ಠಿಯಿಂದಾಗಿ ಮನೆ ಮಠ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗಿರುವ ಕೊಡಗಿನ ನಿರಾಶ್ರಿತರಿಗೆ ಎಲ್ಲಾ ಸಂಘ ಸಂಸ್ಥೆಗಳೂ ಮತ್ತು ಸಾರ್ವಜನಿಕರು ಸಹಾಯ ಹಸ್ತ ಚಾಚಲು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಎಂದು ಮನವಿ ಮಾಡಿದರು.
ಕಾಂಗ್ರೇಸ್ ವಿಧಾನಸಭಾ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ತಿಲಕ್, ಮರ್ವಿನ್, ಸನ್ನಿಧ್, ಅಮರ್ ಹಾಜರಿದ್ದರು.