ಕೊತ್ತಂಬರಿ ಸೊಪ್ಪು ಖರೀದಿ ಮಾಡದಿದ್ದಕ್ಕೆ ಗ್ರಾಹಕನಿಗೆ ಚಾಕು ಇರಿದ ವ್ಯಾಪಾರಿ!

78
firstsuddi

ಹುಬ್ಬಳ್ಳಿ : ತನ್ನ ಬಳಿ ಕೊತ್ತಂಬರಿ ಸೊಪ್ಪು ಖರೀದಿಸಿಲ್ಲವೆಂದು ವ್ಯಾಪಾರಿಯೊಬ್ಬ ಗ್ರಾಹಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ವಿಚಿತ್ರ ಘಟನೆ ನಗರದ ಹಳೇ ಹುಬ್ಬಳ್ಳಿ ಗೌಳಿಗಲ್ಲಿಯಲ್ಲಿ ನಡೆದಿದೆ.

 ಹಳೇ ಹುಬ್ಬಳ್ಳಿ ಬಾಣತಿಕಟ್ಟಿಯ ಮೆಹಬೂಬನಗರದ ನಿವಾಸಿ ಮೊಹಮ್ಮದ್​ ಗೌಸ್ ಬಿಜಾಪುರ ಎಂಬುವವರ ಮೇಲೆ ಕೊತ್ತಂಬರಿ ವ್ಯಾಪಾರ ಮಾಡುತ್ತಿದ್ದ ಅದೇ ಪ್ರದೇಶದ ಖಾದರ್ ಹಾಗೂ ಆತನ ಸಹಚರರು ಚಾಕು ಇರಿದು ಹಲ್ಲೆ ಮಾಡಿದ್ದಾರೆ.

ಮೊಹಮ್ಮದ್​ ಗೌಸ್ ಖಾಯಂ ಆಗಿ ಖಾದರ್ ಬಳಿ ಕೊತ್ತಂಬರಿ ಸೊಪ್ಪು ಖರೀದಿ ಮಾಡುತ್ತಿದ್ದರು. ಆದರೆ ನಿನ್ನೆ ಖಾದರ್ ಬಳಿ ಕೊತ್ತಂಬರಿ ಸೊಪ್ಪು ಸರಿಯಿಲ್ಲವೆಂದು ಬೇರೆ ಕಡೆಗೆ ಹೋಗಿದ್ದಾರೆ. ಇದರಿಂದ ಕೋಪಗೊಂಡ ಖಾದರ್ ಮೊಹಮ್ಮದ್ ಗೆ ಚಾಕು ಇರಿದಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಗಾಯಾಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.